ದಕ್ಷಿಣ ಕನ್ನಡ : ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಮಿತ್ತ ಬೈಲಿನ ಬಿ ಕೆ ದೇವರಾವ್ ಇವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಕೃಷಿ ಸಸ್ಯ ತಳಿ ಸಂರಕ್ಷಕ ಪ್ರಶಸ್ತಿ ದೊರಕಿದೆ.

ಹಲವು ಸಮಸ್ಯೆಗಳನ್ನ ಎದುರಿಸುತ್ತಿರುವ ಕೃಷಿ ಕ್ಷೇತ್ರ ಹಲವು ಕಡೆ ಅಪ್ರತಿಮ ಸಾಧನೆಗಳನ್ನು ಮಾಡುತ್ತಿರುವುದು ಸಂತೋಷದ ವಿಷಯ, ಅದರಲ್ಲೂ ಕರಾವಳಿ ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಸಾಧನೆ ಮಾಡಿ ಹಲವು ಪ್ರತಿಷ್ಠಿತ ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ ಎನ್ನುವುದು ಸಂತಸದ ವಿಷಯ, ಗೌರವ ಸನ್ಮಾನಕ್ಕೆ ಇನ್ನೊಂದು ಸೇರ್ಪಡೆ ಬೆಳ್ತಂಗಡಿ ತಾಲೂಕಿನ ಬಿ ಕೆ ದೇವ ರಾವ್ ಹವಾಮಾನ ವೈಪರಿತ್ಯ, ಕಾರ್ಮಿಕರ ಕೊರತೆ, ನೀರಿನ ಸಮಸ್ಯೆ, ಅನುಭವದ ಕೊರತೆ ಮೊದಲಾದ ಹಲವಾರು ಸಮಸ್ಯೆಗಳು ರೈತರನ್ನು ಕಾಡುತ್ತಿದ್ದರು ಕೆಲವೊಂದು ರೈತರು ಸಾಧನೆಗಳ ಮೂಲಕ ಕೃಷಿಯಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿದ್ದಾರೆ. ಅಪರೂಪದ ತಳಿಗಳನ್ನು ಸಂಗ್ರಹಿಸಿ ಬೆಳೆಸುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ಕೃಷಿಲೋಕಕ್ಕೆ ನೀಡುತ್ತಿದ್ದಾರೆ.
ದಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ರೈತ ಅಮೈ ಬಿ.ಕೆ. ದೇವರಾವ್. ಹಲವಾರು ಕೃಷಿ ಸಂಬಂಧಿ ಸಸ್ಯಗಳ ನೂರಾರು ತಳಿಗಳನ್ನು ಸಂಗ್ರಹಿಸಿ,ಬೆಳೆಸಿರುವ ಇವರಿಗೆ ‘ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ’ 2020- 21 ಒಲಿದು ಬಂದಿದ್ದು, ಸೆಪ್ಟೆಂಬರ್ 12ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.ದೇಶದ ರಾಜ್ಯದ ಇಬ್ಬರಿಗೆ ಈ ಪ್ರಶಸ್ತಿ ಸಿಕ್ಕಿದ್ದು ಅದು ಒಂದೂವರೆ ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಹೊಂದಿದೆ.
ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ ಬಿ.ಕೆ.ದೇವರಾವ್ ಇವರು, ಕೃಷಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬನು ಪ್ರಯತ್ನಿಸಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತಳಿಗಳ ಸಂಗ್ರಹ ಹಾಗೂ ಅವುಗಳನ್ನು ಬೆಳೆಸುವ ಕೆಲಸ ಮಾಡುವ ಉತ್ಸಾಹ ಹೊಂದಿದ್ದೇನೆ” ಎಂದರು. ಇವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಅವರು ತಂದೆಯ ಸಾಧನೆಗೆ ಬೆನ್ನೆಲುಬಾಗಿದ್ದು ಬೀಜ ಬ್ಯಾಂಕ್ ಸ್ಥಾಪಿಸಿ, ಬೇಡಿಕೆ ಇಡುವ ರೈತರಿಗೆ ತಮ್ಮ ತಂದೆಯ ಸಂಗ್ರಹದಲ್ಲಿರುವ ಭತ್ತದ ತಳಿಯ ಒಂದು ಮುಷ್ಟಿ ಭತ್ತ ನೀಡುವ ಯೋಜನೆ ಕೈಗೊಂಡಿದ್ದಾರೆ. ಒಂದು ಮುಷ್ಟಿ ಭತ್ತ ಒಯ್ಯುವ ರೈತ ಇದರ ಬೆಳೆ ಬೆಳೆದ ಬಳಿಕ ಎರಡು ಮುಷ್ಟಿ ಭತ್ತವನ್ನು ಇವರಿಗೆ ನೀಡಬೇಕು. ಇದರಿಂದ ಭತ್ತದ ತಳಿಗಳು ಹೆಚ್ಚು ಕಡೆ ಬೆಳೆಯಲು ಹಾಗೂ ಬೇಡಿಕೆ ಸಲ್ಲಿಸುವವರಿಗೆಲ್ಲ ನೀಡಲು ಸಹಕಾರಿಯಾಗುತ್ತದೆ ಎನ್ನುವುದು ಕುಟುಂಬದ ಆಲೋಚನೆ, ಆ ಮುಖಾಂತರ ಇನ್ನಷ್ಟು ಜನರಿಗೆ ಬತ್ತದ ಬೆಳೆ ಪ್ರೇರಣೆಯಾಗಲಿ ಎಂದರು.



