ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯದ ಮನೆಯೊಂದರ ನೆಲಮಾಳಿಗೆಯಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಕಳವಾಗಿರುವ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ ಎರಡೇ ದಿನಗಳಲ್ಲಿ ದೂರುದಾರರ ಮನೆಯಂಗಳದಲ್ಲೇ ಕಳವಾದ ಎಲ್ಲ ಚಿನ್ನಾಭರಣ ಪತ್ತೆಯಾದ ಘಟನೆ ನಡೆದಿದೆ.
ಪ್ರಮೋದ್ ವಿ ಭಿಡೆ ಜುಲೈ 5 ರಿಂದ ತಮ್ಮ ಮನೆಯ ಸಿಮೆಂಟ್ ಪ್ಲಾಸ್ಟರಿಂಗ್ ಮತ್ತು ಪೇಂಟಿಂಗ್ ಕೆಲಸಕ್ಕೆ 10 ರಿಂದ 13 ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಜುಲೈ 19 ರಂದು ಅವರು ತಮ್ಮ ಕೆಲಸ ಮುಗಿಸಿದ್ದರು. ಸೆಪ್ಟೆಂಬರ್ 12 ರಂದು ಪ್ರಮೋದ್ ಅವರ ಪತ್ನಿ 122 ಗ್ರಾಂ ತೂಕದ ಚಿನ್ನವನ್ನು ತೆಗೆದುಕೊಳ್ಳಲು ಸೆಲ್ಲಾರ್‌ಗೆ ಹೋಗಿದ್ದರು. ಸಮಾರಂಭವೊಂದಕ್ಕೆ ಧರಿಸುವ ಸಲುವಾಗಿ ಐದು ಲಕ್ಷ ರೂಪಾಯಿ ಮೌಲ್ಯದ ಅದು ಕಾಣೆಯಾಗಿದೆ. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಠಾಣೆಯ ಪೊಲೀಸರು ಹಲವು ಮಂದಿಯ ವಿಚಾರಣೆ ನಡೆಸಿದ್ದು, ಕೆಲವು ಕಾರ್ಮಿಕರನ್ನು ಕರೆಯಿಸಿ ವಿಚಾರಣೆ ನಡೆಸಿದ್ದರು. ಇನ್ನು ಕೆಲವರು ಊರಿನಲ್ಲಿ ಇಲ್ಲದೇ ಇದ್ದು, ಅವರನ್ನು ಕೂಡ ಕರೆಯಿಸಿ, ವಿಚಾರಣೆ ನಡೆಸಲು ಸಿದ್ಧತೆಯನ್ನೂ ನಡೆಸಿಕೊಂಡಿದ್ದರು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಳವಾದ ಚಿನ್ನಾಭರಣ ಮನೆಯಂಗಳದಲ್ಲಿ ಕಂಡುಬಂದಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ ಕಳವು ಮಾಡಿದವರು ವೃತ್ತಿಪರ ಕಳ್ಳರಲ್ಲ ಎಂದು ಹೇಳಬಹುದು, ಕಣ್ಣಿಗೆ ಸಿಕ್ಕಿದ್ದನ್ನು ಯಥಾವತ್ ದೋಚಿರುವ ಸಾಧ್ಯತೆಯೇ ಹೆಚ್ಚಿರುವಂತೆ ಕಂಡುಬರುತ್ತಿದೆ ಚಿನ್ನ ಕದ್ದೊಯ್ದ ಕಳ್ಳರು ಪೊಲೀಸರ ವಿಚಾರಣೆಗೆ ಹೆದರಿ ಚಿನ್ನಾಭರಣವನ್ನು ಮರಳಿಸಿರಬಹುದು ಎಂದು ಶಂಕಿಸಲಾಗಿದೆ. ಮನೆಮಂದಿಗೆ ಚಿನ್ನ ಸಿಕ್ಕಿತಲ್ಲ ಎನ್ನುವ ಆಶಾಭಾವ, ಆದರೆ ಕೃತ್ಯ ನಡೆಸಿದವರಾರು ಎನ್ನುವ ಬಗ್ಗೆ ಮಂದುವರಿಸಬೇಕೆ? ಬೇಡವೇ? ಎನ್ನುವ ಪ್ರಶ್ನೆ ಪೊಲೀಸರಿಗೆ ಮೂಡಿದ್ದು, ಸದ್ಯ ವಿಚಾರಣೆಯನ್ನು ನಿಲ್ಲಿಸಿದ್ದಾರೆ. ಮನೆಮಂದಿ ವಿಚಾರಣೆ ಮುಂದುವರಿಸಲು ಆಗ್ರಹಿಸಿದರೆ ವಿಚಾರಣೆ ಮುಂದುವರಿಯುವ ಸಾಧ್ಯತೆಯೂ ಇದೆ.



