ದಕ್ಷಿಣ ಕನ್ನಡ; ಕರ್ತವ್ಯದಲ್ಲಿದ್ದ ಗುಪ್ತಚರ ಇಲಾಖಾ ಸಿಬ್ಬಂದಿ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಉರ್ವ ಗುಪ್ತಚರ ಇಲಾಖಾ ಕಚೇರಿಯಲ್ಲಿ ನಡೆದಿದೆ.

ನಗರದ ಉರ್ವ ಮಾರಿಗುಡಿ ನಿವಾಸಿಯಾದ ರಾಜೇಶ್ ಬಿ.ಯು. (53) ಅವರಿಗೆ ಶನಿವಾರ ಮಧ್ಯಾಹ್ನ ವೇಳೆ ಗುಪ್ತಚರ ಇಲಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ರೆಸ್ಟ್ ರೂಮಿಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಂತೆ ಅವರು ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ರಾಜೇಶ್ ಅವರು 1993ನೇ ಬ್ಯಾಚ್ ಗೆ ಸೇರಿದವರಾಗಿದ್ದು, ನಿವೃತ್ತಿಗೆ ಇನ್ನೂ 7 ವರ್ಷಗಳ ಕಾಲ ಇತ್ತು. ಉತ್ತಮ ಸನ್ನಡತೆಯ ವ್ಯಕ್ತಿಯಾಗಿದ್ದ ರಾಜೇಶ್ ಇವರು ಮೂಲತಃ ವಾಮಂಜೂರು ಸಮೀಪದ ಮೂಡುಶೆಡ್ಡೆ ನಿವಾಸಿಯಾಗಿದ್ದು , ಪ್ರಸ್ತುತ ಮಂಗಳೂರಿನಲ್ಲಿ ವಾಸವಿದ್ದರು, ರಾಜೇಶ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ರಮವಾಗಿ ಮೂಡು ಶೆಡ್ಡೆ ಹಾಗೂ ಸಂತ ರೈಮೆಂಡ್ಸ್ ಹೈಸ್ಕೂಲ್ ವಾಮಂಜೂರು ಇಲ್ಲಿ ಪೂರೈಸಿದ್ದು, ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಶಾಲಾ ಶಿಕ್ಷಕರು ಮತ್ತು ತನ್ನ ಸಹಪಾಠಿ ವಿದ್ಯಾರ್ಥಿಗಳೊಡನೆ ಈಗಲೂ ನಿರಂತರ ಸಂಪರ್ಕವಿಟ್ಟುಕೊಂಡು, ಶಾಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾದರಿ ಹಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದರು.
ಅವರು ಸುರತ್ಕಲ್ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.



