ಸುಳ್ಯ ಜಯನಗರ ನಿವಾಸಿ ಮಹಿಳೆಗೆ ವಿದೇಶದಲ್ಲಿರುವ ಗಂಡ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ ನೀಡಿರುವ ವಿಭಿನ್ನ ಘಟನೆ ನಡೆದಿದೆ.

ಕೇರಳ ತ್ರಿಶೂಲ್ ಮೂಲದ ಅಬ್ದುಲ್ ರಾಶಿದ್ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಮಹಿಳೆಯನ್ನು ವಿವಾಹವಾಗಿದ್ರು. ವಿವಾಹದ ಬಳಿಕ ಜೊತೆಗೆ ಉತ್ತಮವಾಗಿ ಸಂಸಾರ ನಡೆಸಿದ್ದು, ಇವರ ದಾಂಪತ್ಯಕ್ಕೆ ಎರಡು ಹೆಣ್ಣುಮಕ್ಕಳು ಕೂಡ ಇದ್ದಾರೆ. ಎರಡು ವರ್ಷಗಳ ಮೊದಲು ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದು ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಮಹಿಳೆಯನ್ನು ಸುಳ್ಯದಲ್ಲಿರುವ ತವರುಮನೆಯಲ್ಲಿ ಬಿಟ್ಟು ವಿದೇಶಕ್ಕೆ ಮರಳಿದ್ದಾನೆ.
ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಸಂಬಂಧಿಕರು, ಹಿರಿಯರು ಮಾತನಾಡಿ ಸರಿಪಡಿಸಲು ಪ್ರಯತ್ನಿಸಿದರು. ಆದರೆ ಇದು ಯಾವುದನ್ನು ಕೇಳದೇ ಪತಿ ರಾಶಿದ್ ಏಕಾಏಕಿ ಪತ್ನಿಯ ಮೊಬೈಲ್‌ಗೆ ಮೂರು ತಲಾಖ್‌ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ.
ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ಪತ್ನಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



