ಚೆನ್ನೈ: ಖ್ಯಾತ ತಮಿಳು ನಟ ವಿಜಯ್ ಆಂಟೋನಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂಗೀತ ಸಂಯೋಜಕ, ನಟ ಮತ್ತು ನಿರ್ಮಾಪಕ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಅವರು ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

16 ವರ್ಷದ ಮಗಳು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ಮೀರಾ ಚೆನ್ನೈನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ವರದಿಗಳ ಪ್ರಕಾರ, ಅವರು ಒತ್ತಡದಲ್ಲಿದ್ದರು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಮೀರಾ ಚೆನ್ನೈನ ಚರ್ಚ್ ಪಾರ್ಕ್ ಶಾಲೆಯಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೀರಾ ಇತ್ತೀಚಿನ ದಿನಗಳಲ್ಲಿ ತುಂಬಾ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ನಿನ್ನೆ ರಾತ್ರಿ ಅವರು ತನ್ನ ರೂಮ್ನಲ್ಲಿ ಮಲಗಲು ಹೋಗಿದ್ದರು. ಮುಂಜಾನೆ 3 ಘಂಟೆ ಸುಮಾರಿಗೆ ತಂದೆ ವಿಜಯ್ ಮಗಳ ರೂಮ್ಗೆ ತೆರಳಿದ್ದರು. ಈ ವೇಳೆ ಆಕೆ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.



