ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘವು 2022-23 ನೇ ಸಾಲಿನಲ್ಲಿ ರೂ.1.50 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ 12.50 ಡಿವಿಡೆಂಟ ನ್ನು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಘೋಷಿಸಿದರು.
ಶನಿವಾರ ಸಂಘದ ಕೇಂದ್ರ ಕಛೇರಿಯಲ್ಲಿನ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಒಟ್ಟು ರೂ 92.63 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಸಾಲ ವಸೂಲಾತಿಯಲ್ಲಿಯು ಶೇ. 99 ರಷ್ಟು ಪುಗತಿ ಸಾಧಿಸಲಾಗಿದ್ದು,ಲೆಕ್ಕ ಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿ ಪಡೆದಿದೆ ಎಂದರು.

100 ಕೋ.ಸಾಲದ ಗುರಿ
2023-24 ನೇ ಸಾಲಿನಲ್ಲಿ 100 ಕೋ.ರೂ. ಸಾಲ ವಿತರಣೆಯ ಗುರಿಯ ನಿರೀಕ್ಷೆಯೊಂದಿಗೆ ಶೇ.100 % ಸಾಲ ವಸೂಲಾತಿಗೆ ಪ್ರಯತ್ನಿಸಲಾಗುವುದು, ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಬೆಳೆ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೂ ಹಾಗೂ ಕೃಷಿ ಮಧ್ಯಮಾವಧಿ ಸಾಲವನ್ನು 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ಮಾಡಿ ಸರಕಾರ ಆದೇಶಿಸಿರುತ್ತದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸರಿಯಾದ ನಿರ್ದೇಶನ ಬಂದ ಮೇಲೆ ಹೆಚ್ಚುವರಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಪ್ರಭು ಅವರು ಹೈನುಗಾರಿಕೆ, ಕೋಳಿ , ಆಡು, ಹಂದಿ ಸಾಕಾಣಿಕೆಗೆ ಶೂನ್ಯ ಬಡ್ಡಿದರದಲ್ಲಿ ಗರಿಷ್ಟ 2 ಲಕ್ಷ ಸಾಲ ವಿತರಿಸಲಾಗುವುದು ಎಂದರು.
ಇದೇ ವೇಳೆ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ಗರಿಷ್ಠ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕಾರಿಸಲಾಯಿತು.

ಇಸ್ರೋ ತಂಡಕ್ಕೆ ಅಭಿನಂದನಾ ನಿರ್ಣಯ: ಬಾಹ್ಯಾಕಾಶದಲ್ಲಿ ಮಹತ್ವಾಕಾಂಕ್ಷಿಯ ಚಂದ್ರಯಾನ -3,ವಿಕ್ರಮನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಉಡಾವಣೆ ಮಾಡಿ ಯಾಶಸ್ವಿಯಾದ, ಇಸ್ರೋ ತಂಡ ಇದಕ್ಕೆ ಪ್ರೇರಣೆಯಾದ ಭಾರತದ ರಾಷ್ಟ್ರ ಪತಿ ದೌಪದಿ ಮುರ್ಮ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ ಸರ್ವಾನುಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
2018-19 ರ ಸಾಲಮನ್ನಾ ಯೋಜನೆಯಲ್ಲಿ 21 ಜನರಿಗೆ ಸಾಲ ಮನ್ನಾ ಬಾರದಿರುವ ಬಗ್ಗೆ ಸಂಘದ ಸದಸ್ಯರ ಪ್ರಸ್ತಾಪದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಸಹಕಾರ ಸಚಿವರಿಗೆ ಮನವಿ ಮಾಡಲು ಸಭೆ ನಿರ್ಣಯಿಸಿತು.
ಸದಸ್ಯರ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ನಂತಹ ಉನ್ನತ ವ್ಯಾಸಂಗಕ್ಕೆ ಶೂನ್ಯ ಬಡ್ಡಿ ರಹಿತ ಸಾಲ ನೀಡುವಂತೆ ಸಭೆಯಲ್ಲಿ ಪ್ರಸ್ತಾವನೆಯಾಯಿತು. ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಧ್ಯಕ್ಷ ಪ್ರಭಾಕರ ಪುಭು ಮತ್ತು ಆಡಳಿತ ಮಂಡಳಿ ನಿರ್ದೆಶಕರನ್ನು ಸದಸ್ಯರ ವತಿಯಿಂದ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಸತೀಶ್ ಪೂಜಾರಿ, ನಿರ್ದೇಶಕರಾದ ದಿನೇಶ್ ಪೂಜಾರಿ ಹುಲಿಮೇರು, ವೀರಪ್ಪ ಪರವ, ಜಾರಪ್ಪ ನಾಯ್ಕ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ, ಅರುಣಾ ಎಸ್ ಶೆಟ್ಟಿ, ಮಂದಾರತಿ ಎಸ್ ಶೆಟ್ಟಿ, ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಂಘದ ಮುಖ್ಯ ನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿವಾಚಿಸಿದರು.ನಿರ್ದೇಶಕರುಗಳಾದ ಸಂದೇಶ್ ಶೆಟ್ಟಿ ಪೊಡಂಬು ಸ್ವಾಗತಿಸಿದರು.
ರಾಜೇಶ್ ಶೆಟ್ಟಿ ಕೊನೆರಬೆಟ್ಟು ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಉಮೇಶ್ ಗೌಡ ವಂದಿಸಿದರು. ಸಹಾಯಕಕಾರ್ಯ ನಿರ್ವಹಣಾಧಿಕಾರಿ ಮಲ್ಲಿಕಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು.








