ಮುಲ್ಕಿ: ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ. ಮನುಷ್ಯನಿಗೆ ಎಲ್ಲ ಸಂಪತ್ತು ಇದ್ದರೂ ಅದನ್ನು ಸವಿಯಬೇಕಾದರೆ ಆರೋಗ್ಯ ಉತ್ತಮವಾಗಿರಬೇಕು. ಇಂದಿನ ಒತ್ತಡದ ಜೀವನ ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲ ಒಂದು ವೈಪರಿತ್ಯವನ್ನು ಕಾಣುತ್ತಿದ್ದೇವೆ. ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಲಯನ್ ಕ್ಲಬ್ ಮುಲ್ಕಿ ಇದರ ವಲಯ ಅಧ್ಯಕ್ಷರಾದ ಲಯನ್ ಸುಜಿತ್ ಸಾಲಿಯನ್ ಹೇಳಿದರು.

ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ಮುಲ್ಕಿ ಹಾಗೂ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಉಚಿತ ನೇತ್ರಾ ತಪಾಸಣಾ ಶಿಬಿರದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಪ್ರಾಂಶುಪಾಲರಾದ ಶ್ರೀ ಜಿತೇಂದ್ರ ವಿ ರಾವ್, ಪ್ರಪಂಚ ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು. ಪ್ರಪಂಚದಲ್ಲಿ ಕೋಟ್ಯಂತರ ಜನರು ಕಣ್ಣಿನ ವಿವಿಧ ದೋಷಗಳಿಂದ ಬಳಲುತ್ತಿದ್ದು ಅನೇಕರು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಹೀಗಾಗಿ ಜನರು ಕಣ್ಣಿನ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಕಾಲ ಕಾಲಕ್ಕೆ ತಪಾಸನೆಯನ್ನು ಮಾಡಿಕೊಳ್ಳುವುದರಿಂದ ಕಣ್ಣಿನ ದೋಷಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಿದೆ. ಕಣ್ಣು ದೇಹದ ಸೂಕ್ಷ್ಮ ಅಂಗವಾಗಿದ್ದು ಬದುಕಿಗೆ ಬೆಳಕಾಗಿರಬೇಕಾದರೆ ವಿದ್ಯಾರ್ಥಿಗಳಿಗೆ ಇಂತಹ ಶಿಬಿರಗಳು ಅಗತ್ಯವೆಂದು ಲಯನ್ಸ್ ಕ್ಲಬ್ ನ ಕಾರ್ಯವನ್ನು ಶ್ಲಾಘಿಸಿದರು.

ಲಯನ್ಸ್ ಕ್ಲಬ್ ಮುಲ್ಕಿ ಇದರ ಅಧ್ಯಕ್ಷರಾದ ಲ. ಶೀತಲ್ ಸುಶೀಲ್ ಬಂಗೇರ, ಕೋಶಾಧಿಕಾರಿಗಳಾದ ಲ.ಶೋಭಾ ಸುಜಿತ್, ಕಾರ್ಯಕ್ರಮ ಸಂಯೋಜಕರಾದ ಲ.ಉದಯ ಶೆಟ್ಟಿ, ವೈಧ್ಯಾಧಿಕಾರಿಗಳಾದ ಡಾ. ಶ್ರೀಶೇರಿ ಉಪಸ್ಥಿತರಿದ್ದರು.
ಸಹಶಿಕ್ಷಕಿಯರಾದ ಹೇಮಲತಾ ಕಾರ್ಯಕ್ರಮ ನಿರೂಪಿಸಿ , ದೀಪಿಕಾ ಸ್ವಾಗತಿಸಿದರು ಪ್ರಜ್ವಲ ವಂದಿಸಿದರು.




