ಸ್ಕೂಟರ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ರಾಷ್ಟರೀಯ ಹೆದ್ದಾರಿ 66ರ ತೊಕ್ಕೊಟ್ಟು ಕೆರೆಬೈಲು ಬಳಿ ಸ್ಕೂಟರ್‌ನಿಂದ ಬಿದ್ದು ಅಪಘಾತಕ್ಕೀಡಾಗಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಾಸರಗೋಡು ಮಧೂರು ನಿವಾಸಿ ಸುಮಾ ನಾರಾಯಣ ಗಟ್ಟಿ (೫೨) ಮೃತ ದುರ್ದೈವಿ. ಮೂಲತಃ ಬಂಟ್ವಾಳ ನೆಟ್ಲದವರಾಗಿದ್ದ ಇವರು ಭಾನುವಾರ ಮಧೂರಿನಿಂದ ಕುಟುಂಬದ ಮನೆ ಪಿಲಾರು ಅರಮನೆಯಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಕಾಸರಗೋಡಿಗೆ ಹೊರಡಲು ಸಹೋದರನ ಬೈಕ್‌ನಲ್ಲಿ ತೊಕ್ಕೊಟ್ಟು ಜಂಕ್ಷನ್‌ಗೆ ತೆರಳಿದವರು, ಜಪ್ಪಿನಮೊಗರು ಬಳಿಯ ಸಂಬಂಧಿಕರ ಮನೆಗೆ ತೆರಳಿ ವಾಪಾಸ್ ತೊಕ್ಕೊಟ್ಟು ಕಡೆಗೆ ಬರುವಾಗ ಈ ದುರಂತ ಸಂಭವಿಸಿದೆ.
ತೊಕ್ಕೊಟ್ಟು ಜಂಕ್ಷನ್ ಬದಲು ಕೋಟೆಕಾರು ಬೀರಿನವರೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈ ಓವರ್ ಸಂಪರ್ಕಿಸುವ ಕೆರೆಬೈಲು ನಾಗನಕಟ್ಟೆ ಬಳಿ ಚಲಿಸುತ್ತಿದ್ದ ಸ್ಕೂಟರ್‌ನಿಂದ ಸುಮಾ ಉರುಳಿ ಬಿದದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರು ಪತಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.



