ಮುಲ್ಕಿ: ಮಾದಕ ದ್ರವ್ಯ ಜನರಲ್ಲಿ ಭಯ, ಆತಂಕ ಮತ್ತು ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ. ಇದು ಮೆದುಳು ಮತ್ತು ನರಮಂಡಲದ ಬೂದು ದ್ರವ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ, ಇದರಿಂದ ಅವರಿಗೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಲು ಕಷ್ಟಕರವಾಗುತ್ತದೆ.

ಮಾದಕ ವ್ಯಸನವು ಹಸಿವು ಮತ್ತು ತೂಕದ ತೀವ್ರ ನಷ್ಟ, ಮಲಬದ್ಧತೆ, ಹೆಚ್ಚಿದ ಆತಂಕ ಮತ್ತು ಕಿರಿಕಿರಿ, ನಿದ್ರಾಹೀನತೆ ಮತ್ತು ಬೌದ್ಧಿಕ ಕಾರ್ಯಚಟುವಟಿಕೆಗಳ ಕ್ರಮೇಣ ದುರ್ಬಲತೆಗೆ ಕಾರಣವಾಗಬಹುದು ಎಂದು ಮೂಲ್ಕಿ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಮಾರುತಿ ಪಿ. ಹೇಳಿದರು .ಇವರು ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆದ ಮಾದಕ ದ್ರವ್ಯ ಜಾಗೃತಿ ಅಭಿಯಾನದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಜಿತೇಂದ್ರ ವಿ. ರಾವ್, ಡ್ರಗ್ ಕೇವಲ ಸೇವನೆ ಮಾಡುವವರ ಮೇಲೆ ಮಾತ್ರವಲ್ಲದೇ ಸಮಾಜದ ಮೇಲೆ ಕೂಡ ಭಾರೀ ಪರಿಣಾಮ ಹೊಂದಿದೆ. ಇದು ಸಾಮಾಜಿಕವಾಗಿ, ದೈಹಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ ಇದರ ಬಗ್ಗೆ ಜಾಗೃತರಾಗಿ ಎಂದು ತಿಳಿಸಿದರು.

ಮೂಲ್ಕಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶ್ರೀದೇವಿ ಚೌಹಾಣ್ ಹಾಗೂ ಸುರೇಂದ್ರನ್ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ದಿವ್ಯಾ ಟಿ. ಶೆಟ್ಟಿ ಸ್ವಾಗತಿಸಿದರು, ಸಹ ಶಿಕ್ಷಕಿ ಹೇಮಲತಾ ವಂದಿಸಿದರು, ದೀಪಿಕ ಕಾರ್ಯಕ್ರಮ ನಿರೂಪಿಸಿದರು.



