ಬಂಟ್ವಾಳ: ಸರಕಾರವು ಗ್ರಾಮೀಣ ಭಾಗದ ಜನತೆಯ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೊಳಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಬಾರಿಯ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಅಮ್ಮುಂಜೆ ಪಂಚಾಯತ್ ಆಯ್ಕೆಯಾಗಿದ್ದು, ಅ. 2ರ ಗಾಂಧಿ ಜಯಂತಿ ದಿನದಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಂಚಾಯತ್ ತಂಡ ಪ್ರಶಸ್ತಿಯನ್ನು ಪಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳಿಂದ ತಲಾ ಒಂದೊಂದು ಪಂಚಾಯತ್‌ಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬಂಟ್ವಾಳದಿಂದ ಅಮ್ಮುಂಜೆ ಪಂಚಾಯತ್ ಹೆಚ್ಚಿನ ಅಂಕ ಪಡೆದು ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಗ್ರಾಮದಲ್ಲಿ ರಸ್ತೆಗಳ ಅಭಿವೃದಿಗೆ ಗಮನ, ಉದ್ಯೋಗ ಖಾತರಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ಬೀದಿ ದೀಪಗಳ ನಿರ್ವಹಣೆ, ಸ್ಮಶಾನ, ಸ್ವಚ್ಛತಾ ಕಾರ್ಯ, ಗ್ರಾಂಥಾಲಯ ಬಳಕೆ ಮೊದಲಾದ ವಿಚಾರಗಳ ಕುರಿತು ಪಂಚಾಯತ್ ವಿಶೇಷ ಗಮನ ನೀಡಿದ ಹಿನ್ನೆಲೆಯಲ್ಲಿ ಈ ಪುರಸ್ಕಾರ ಲಭಿಸುವಂತಾಗಿದೆ ಎಂದು ಅಮ್ಮುಂಜೆ ಪಂಚಾಯತ್ ತಂಡ ತಿಳಿಸಿದೆ.



