ಮೂಡಬಿದಿರೆ: ದೇಶದಾದ್ಯಂತ ಸೆಪ್ಟಂಬರ್ 15 ರಿಂದ ಅಕ್ಟೋಬರ್ 02ರ ವರೆಗೆ ವಿಶೇಷ ಸ್ವಚ್ಛತಾ ಅಭಿಯಾನದ ಹಿನ್ನಲೆಯಲ್ಲಿ ನಡೆಯುತ್ತಿರುವ “ಸ್ವಚ್ಛತಾ ಹೀ ಸೇವಾ”ದ ಅಂಗವಾಗಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಆಸುಪಾಸು ಹಾಗೂ ಪುತ್ತಿಗೆ ಗ್ರಾಮ ಪಂಚಾಯಿತಿಯ ರಸ್ತೆಯ ಬದಿಗಳನ್ನು ಕಾಲೇಜಿನ ಸುಮಾರು ನೂರು ವಿದ್ಯಾರ್ಥಿಗಳು, 25ಕ್ಕೂ ಅಧಿಕ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಸೇರಿ ಸ್ವಚ್ಛಗೊಳಿಸಿದರು.
ವಿದ್ಯಾರ್ಥಿಗಳು ಅಭಿಯಾನದ ಅಂಗವಾಗಿ ‘ಮನಸ್ಸು ಮತ್ತು ಪರಿಸರ ಎರಡನ್ನು ಸ್ವಚ್ಛವಾಗಿಡಿ’, ‘ಸ್ವಚ್ಛತೆ ದೈವತ್ವ’, ‘ಪ್ಲಾಸ್ಟಿಕ್ ಉಳಿವು ಜೀವಿಗಳ ಅಳಿವು’, ‘ಸ್ವಚ್ಛತೆ ಕಾಪಾಡಿ ರೋಗಗಳಿಂದ ದೂರವಿರಿ’ ಮುಂತಾದ ಜಾಗೃತಿ ಫಲಕಗಳೊಂದಿಗೆ ಕರ‍್ಯಕ್ರಮದಲ್ಲಿ ಪಾಲ್ಗೊಂಡರು.

ನಂತರ 100ಕ್ಕೂ ಅಧಿಕ ಚೀಲಗಳಲ್ಲಿ ಸಂಗ್ರಹವಾದ ಕಸವನ್ನು ನಗರಸಭೆಯ ವಾಹನದಲ್ಲಿ ಕಳಿಸಿ ವಿಲೇವಾರಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಅರುಣ್ ಕುಮಾರ್, ಸಂಯೋಜಕರುಗಳಾದ ತ್ರಿವೇಣಿ, ಶ್ರೀಧರ, ವಿರನ್, ಸ್ವಾತಿ ಹಾಗೂ ಉಪನ್ಯಾಸಕ ವರ್ಗದವರು ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಪಾಲ್ಗೊಂಡರು.



