ನಾಗಬನ ಹಾಗೂ ಮನೆಯ ಮೇಲೆ ಅಪಾಯಕಾರಿಯಾಗಿ ವಾಲುತ್ತಿದ್ದ ಮರ ಕಡಿಯುತ್ತಿದ್ದ ಮರ ಕಾರ್ಮಿಕರ ಮೇಲೆ ಉರುಳಿದ್ದರಿಂದ ಜಾರ್ಖಂಡ್ ಮೂಲದ ಕಾರ್ಮಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೋಮವಾರ ಮಧ್ಯಾಹ್ನ ಮಜೂರು ಗ್ರಾಮದ ಕರಂದಾಡಿ ಎಂಬಲ್ಲಿ ಈ ಘಟನೆ ನಡೆದಿದೆ.
ಬಿಹಾರ-ಜಾರ್ಖಂಡ್ ಮೂಲದ ದಿನಗೂಲಿ ಕಾರ್ಮಿಕ ಸುಧೀರ್ ಪಂಜೆ ಮೃತ ವ್ಯಕ್ತಿ.

ಕರಂದಾಡಿ ವಿಷ್ಣುಮೂರ್ತಿ ದೇವಸ್ಥಾನದ ಖಾಸಗಿ ಜಮೀನಿನ ಬಳಿ ಇರುವ ನಾಗಬನದ ಮೇಲೆ ವಾಲುತ್ತಿದ್ದ ಗೋಲಿಮರ ‘ಫಿಕಸ್ ಡ್ರುಪೇಸಿಯಾ ಹೆಬ್ಬೆಟ್ಟು’ ಎಂದು ಸ್ಥಳೀಯವಾಗಿ ಕರೆಯಲಾಗುವ ಬೃಹತ್ ಮರಕ್ಕೆ ಕೊಡಲಿ ಏಟು ಹಾಕಲಾಗುತ್ತಿದೆ.

ಮರ ಕಡಿಯುತ್ತಿದ್ದ ಮೂವರು ಕಾರ್ಮಿಕರು ಮರದ ಅವಶೇಷಗಳಡಿ ಸಿಲುಕಿಕೊಂಡರು. ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರನ್ನು ರಕ್ಷಿಸಿ ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರದ ಕೆಳಗೆ ಮೃತಪಟ್ಟ ಕಾರ್ಮಿಕನನ್ನು ಹೊರತೆಗೆಯಲಾಗುತ್ತಿದೆ. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರ ನೆರವಿನಿಂದ ಮರವನ್ನು ತೆಗೆಯಲಾಗುತ್ತಿದೆ.
ಘಟನಾ ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್‌ಐ ಅಬ್ದುಲ್ ಖಾದರ್, ಕ್ರೈಂ ಎಸ್‌ಐ ಪುರುಷೋತ್ತಮ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಬಿದ್ದ ಮರವನ್ನು ತೆಗೆಯಲು ಹಾಗೂ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಸಹಕರಿಸಿದರು.



