ಜನ ಮನದ ನಾಡಿ ಮಿಡಿತ

Advertisement

ಕಾಶ್ಮೀರದಲ್ಲಿ ಐತಿಹಾಸಿಕ ಯಕ್ಷಗಾನ ಪ್ರದರ್ಶನ; ನವರಾತ್ರಿಗೆ ವೈಷ್ಣೋದೇವಿ ಮಂದಿರಕ್ಕೆ ಬರುವಂತೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಆಹ್ವಾನ

“ಮಹಾಭಾರತ ಯುದ್ಧಕ್ಕೆ ಮುನ್ನ ಯಕ್ಷನು ಯುಧಿಷ್ಠಿರನ ಬಳಿ ಜಗತ್ತಿನಲ್ಲಿ ನಿನಗೆ ಅತ್ಯಂತ ಅಚ್ಚರಿಯ ವಿಷಯ ಯಾವುದು ಎಂಬ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಯುಧಿಷ್ಠಿರ, ಜಗತ್ತಿನಲ್ಲಿ ಇಷ್ಟೊಂದು ಸಾವು-ನೋವುಗಳಾಗುತ್ತಿದ್ದರೂ ಬದುಕಿನ ಬಗ್ಗೆ ಜನರಿಗೆ ಏಕಿಷ್ಟು ಆಸಕ್ತಿ ಎನ್ನುವುದೇ ಅಚ್ಚರಿ ಎಂದು ಉತ್ತರಿಸಿದ್ದ. ಯಕ್ಷನು ಈಗ ಜಮ್ಮು-ಕಾಶ್ಮೀರಕ್ಕೆ ಬಂದು ನನ್ನಲ್ಲಿ, ನಿನಗೆ ಮಹದಚ್ಚರಿಯ ವಿಷಯ ಯಾವುದು ಎಂದು ಕೇಳಿದರೆ, ಇಷ್ಟು ಮಂದಿ ಕರ್ನಾಟಕದಿಂದ ಬಂದು ಶ್ರೀನಗರದಲ್ಲಿ ವೈಭವಯುತವಾಗಿ ಯಕ್ಷಗಾನ ಪ್ರದರ್ಶನ ಮಾಡಿದ್ದೇ ದೊಡ್ಡ ಅಚ್ಚರಿ ಎನ್ನುತ್ತೇನೆ…”

ಹೀಗೆ ಹೇಳಿದ್ದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ. ಅವರು ಅ.೨ ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಕರ್ನಾಟಕದ ೨ ಕಲಾ ಪ್ರಕಾರಗಳು ದೇಶದ ಮುಕುಟದ ಮಣಿ ಕಾಶ್ಮೀರದಲ್ಲಿ ಪ್ರದರ್ಶನ ನೀಡಿದ್ದು ಅತ್ಯಂತ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶಿಸಿದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಿದ ಲೆ.ಗವರ್ನರ್‌ ಸಿನ್ಹಾ, ಕಲೆ ಸಮಾಜವನ್ನು ಒಗ್ಗೂಡಿಸುತ್ತದೆ. ಸಮಾಜ ಜಾಗೃತಗೊಂಡಾಗ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶದ ವೈವಿಧ್ಯಮಯ ಕಲೆಗಳು ಈ ಕೆಲಸ ಮಾಡುತ್ತಿವೆ. ನಮ್ಮ ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಅವರು ಗಾಂಧಿ ಜಯಂತಿಗೆ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಗೆ ನೀಡಿದೆ. ಈ ಯಕ್ಷಗಾನ ಕಾರ್ಯಕ್ರಮ ಜಮ್ಮು-ಕಾಶ್ಮೀರದ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ. ಹೀಗಾಗಿ, ನವರಾತ್ರಿ ವೇಳೆ ನಿಮ್ಮ ತಂಡ ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ಮತ್ತೊಮ್ಮೆ ಇದೇ ಪ್ರದರ್ಶನ ನೀಡಬೇಕು ಎಂದು ಆಹ್ವಾನ ನೀಡಿದರು.

ಮಹಾತ್ಮ ಗಾಂಧಿಯವರಿಗೆ ಕರ್ನಾಟಕದೊಂದಿಗೆ ಆತ್ಮೀಯ ಒಡನಾಟವಿದ್ದುದನ್ನು ಉಲ್ಲೇಖಿಸಿದ ಅವರು, ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಮೇಳೈಸಿದೆ. ಗಂಗೂಬಾಯಿ ಹಾನಗಲ್ಲ, ಪಂಡಿತ್ ಭೀಮಸೇನ ಜೋಶಿ, ಪಾಟೀಲ ಪುಟ್ಟಪ್ಪ ಹಾಗೂ ಹಲವರು ಸಾಂಸ್ಕೃತಿಕ, ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ. ಈಗಲೂ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಬಸವಣ್ಣನವರ ವಚನಗಳು ಅನುರಣಿಸುತ್ತಿರುತ್ತವೆ. ಕಲೆ, ಸಂಸ್ಕೃತಿ, ಪರಂಪರೆಯ ನೆಲೆಬೀಡು ಕರ್ನಾಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಅರುಣ್‌ ಕುಮಾರ್‌ ಮೆಹ್ತಾ ಮಾತನಾಡಿ, ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ಇಂಥದ್ದೊಂದು ಜಾನಪದ ಕಲಾ ಪ್ರದರ್ಶನವನ್ನು ನೋಡಿರಲಿಲ್ಲ. ಬಹಳ ಸೊಗಸಾಗಿ ಮನಸ್ಸು ಮುಟ್ಟುವಂತೆ ಯಕ್ಷಗಾನ ಪ್ರದರ್ಶನ ನೀಡಿದ್ದೀರಿ. ಕಥಾನಕವೊಂದನ್ನು ವಿವರಿಸುವ ರೀತಿ ಅನೂಹ್ಯವಾದುದು ಎಂದು ಶ್ಲಾಘಿಸಿದರು.

ಲೆ.ಗವರ್ನಲ್‌ ಕಚೇರಿ ಸಲಹೆಗಾರ ರಾಜೀವ್‌ ರೈ ಭಟ್ನಾಗರ್‌ ಮಾತನಾಡಿ, ಯಕ್ಷಗಾನ ವೀಕ್ಷಣೆ ನಮಗೊಂದು ವಿನೂತನ ಅನುಭವ. ಅದನ್ನು ಪ್ರಸ್ತುತಪಡಿಸಿದ ರೀತಿಯಂತೂ ಅದ್ಭುತ. ಇದಕ್ಕೆ ಕಾರಣಕರ್ತರಾದ ಎಲ್ಲರಿಗೂ ಧನ್ಯವಾದ ಎಂದರು.  ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ ಮತ್ತು ಫೌಂಡೇಷನ್‌ನ ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಲೆ.ಗವರ್ನರ್‌‌ ಮನೋಜ್‌ ಸಿನ್ಹಾ ಅವರು ಸರ್ಕಾರದ ವತಿಯಿಂದ ಸನ್ಮಾನಿಸಿದರು. ಆರಂಭದಲ್ಲಿ ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಶಾಸ್ತ್ರೀಯ, ಜನಪದ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ರೂವಾರಿ ರಾಜೇಶ್‌ ಪ್ರಸಾದ್‌, ವಸಂತ ಶೆಟ್ಟಿ ಜಮ್ಮು-ಕಾಶ್ಮೀರ ಮತ್ತು ಯಕ್ಷಗಾನ ಕಲೆ ಮಟ್ಟಿಗೆ ಇದೊಂದು ಐತಿಹಾಸಿಕ ಕಾರ್ಯಕ್ರಮ. ಏಕೆಂದರೆ, ಜಮ್ಮು-ಕಾಶ್ಮೀರದಲ್ಲಿ ಯಕ್ಷಗಾನ ಪ್ರದರ್ಶನ ನಡೆದಿರುವುದು ಇದೇ ಮೊದಲ ಬಾರಿ. ಇದನ್ನು ನಿಜಗೊಳಿಸಿ ಹೊಸ ಇತಿಹಾಸ ಸೃಷ್ಟಿಸಲು ಕಾರಣರಾಗಿದ್ದು ಜಮ್ಮು-ಕಾಶ್ಮೀರ ವಿದ್ಯುತ್‌ ಇಲಾಖೆಯ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಹಿರಿಯಡ್ಕ ಮತ್ತು ದಿಲ್ಲಿ ಕನ್ನಡ ಶಾಲೆ ಮತ್ತು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ. ಇಂಥದ್ದೊಂದು ಕಾರ್ಯಕ್ರಮ ನಡೆಸುವ ಬಗ್ಗೆ ಲೆ.ಗವರ್ನರ್‌ ಜತೆ ಮಾತುಕತೆ ನಡೆಸಿ, ಗಾಂಧಿ ಜಯಂತಿಯಂದೇ ಯಕ್ಷಗಾನ ಕಾರ್ಯಕ್ರಮ ಏರ್ಪಡಿಸಲಾಯಿತು. ಈ ಕಾರ್ಯಕ್ರಮ ವೀಕ್ಷಿಸಲೆಂದೇ ದಕ್ಷಿಣ ಕನ್ನಡದ 130ಕ್ಕಿಂತ ಹೆಚ್ಚು ಯಕ್ಷಗಾನಾಸಕ್ತರು ಶ್ರೀನಗರಕ್ಕೆ ಬಂದಿದ್ದರು. ವಿಶೇಷ ಎಂದರೆ, ಕಾರ್ಯಕ್ರಮ ವೀಕ್ಷಿಸಿದ ಲೆ.ಗ. ಮನೋಜ್‌ ಸಿನ್ಹಾ, ಮತ್ತೊಮ್ಮೆ ಕೇಂದ್ರಾಡಳಿತ ಪ್ರದೇಶಕ್ಕೆ ಬರುವಂತೆ ಆಹ್ವಾನಿಸಿ, ವೈಷ್ಣೋದೇವಿ ಮಂದಿರದಲ್ಲೇ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಾಗಬೇಕು ಎಂದು ನಿರ್ದೇಶನ ನೀಡಿರುವುದು.

ಏಕ್‌ ಭಾರತ್‌ ಶ್ರೇಷ್ಠ ಭಾರತ್‌ ಎಂಬ ಘೋಷವಾಕ್ಯದಂತೆ ಕಲೆ, ಸಂಸ್ಕೃತಿಗಳ ಆದಾನ-ಪ್ರದಾನ ಮಾಡುವುದು ನಮ್ಮ ಉದ್ದೇಶ. ನಮ್ಮ ಪರಂಪರೆ ದೇಶದ ಮೂಲೆ ಮೂಲೆಗೆ ತಲುಪಬೇಕು. ಅಂತೆಯೇ ಕರಾವಳಿಯ ಕಲೆ ಜಮ್ಮು-ಕಾಶ್ಮೀರಕ್ಕೆ ಬರುವಂತೆ ಮಾಡಿದ್ದೇವೆ.


Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!