ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಕುಸುಮ ಚಂದ್ರಶೇಖರ್ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ನಿತಿನ್ ಹಾಗೂ ಪಂಚಾಯತ್ ಪಿಡಿಒ ಸುಧೀರ್ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ಲೈಟ್ ಹೌಸ್ ಬಳಿಯ ಓಂಕಾರೇಶ್ವರ ಪರಿಶಿಷ್ಟ ಜಾತಿ ಪಂಗಡದ ಕಾಲೋನಿಯಲ್ಲಿ ಮೂಲಭೂತ ಸೌಕರ್ಯಗಳ ಸಮಸ್ಯೆ ಬಹಳಷ್ಟು ಇದ್ದರೂ ಪಂಚಾಯತ್ ಕ್ಯಾರೇ ಮಾಡುತ್ತಿಲ್ಲ, ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ ಕಳೆದ ಹಲವಾರು ವರ್ಷಗಳಿಂದ ಪೂರ್ತಿಗೊಂಡಿಲ್ಲ, ಕಳಪೆ ಕಾಮಗಾರಿ ನಡೆದಿದ್ದು ಈ ಬಗ್ಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಗ್ರಾಮಸ್ಥ ಸದಾಶಿವ ಕುಂದರ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಪಂಚಾಯತ್ ಮಾಜೀ ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಅನೇಕ ಜೆಜೆಎಂ ಕುಡಿಯುವ ನೀರಿನ ಟ್ಯಾಂಕ್ ಕಳಪೆ ಕಾಮಗಾರಿಯಾಗಿದ್ದು ,ನೀರಿನ ಪೈಪುಗಳನ್ನು ಹಾಕಲು ಅರ್ಧಂಬರ್ದ ರಸ್ತೆ ಆಗೆದು ಹಾಕಿ ಕಾಟಾಚಾರದ ಕಾಮಗಾರಿ ನಡೆಸಿದ್ದಾರೆ ಎಂದರು. ಇದಕ್ಕೆ ಇಂಜಿನಿಯರ್ ಪ್ರಶಾಂತ್ ಆಳ್ವ ಉತ್ತರಿಸಿ ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಂಚಾಯತ್ ವ್ಯಾಪ್ತಿಯ ಕೆರೆಕಾಡು ಶಾಲೆ ಬಳಿ ಜಿ.ಪಂ. ವತಿಯಿಂದ ಸ್ವಚ್ಛ ಭಾರತ್ ಮೆಷಿನ್ ನಲ್ಲಿ ನಡೆದ ಬೂದು ನೀರು ನಿರ್ವಹಣೆ ಕಾಮಗಾರಿ ಕಳಪೆಯಾಗಿದ್ದು ಪೈಪುಗಳು ತುಂಡಾಗಿ ಚಲ್ಲಾಪಿಲ್ಲಿಯಾಗಿ ಬಿದ್ದಿದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸದಾನಂದ ಕೆರೆಕಾಡು ಆಗ್ರಹಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಆಗಲೀಕರಣದ ಬಗ್ಗೆ ಮೂಡಾ ದವರಿಂದ ಇನ್ನೂ ಸ್ಪಷ್ಟನೆ ಸಿಗದೆ ಕಳೆದ ಐದು ವರ್ಷದಿಂದ ಗ್ರಾಮಸ್ಥರು ಇನ್ನೂ ಗೊಂದಲದಲ್ಲಿದ್ದಾರೆ ಎಂದು ಗ್ರಾಮಸ್ಥ ಅಶೋಕ್ ಭಟ್ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತಿಯಲ್ಲಿ ಹೃದ್ರೋಗ ಯಂತ್ರ ಇದ್ದರೂ ಯಾಕೆ ಉಪಯೋಗವಾಗುತ್ತಿಲ್ಲ? ಎಂದು ವಿಜಯಶೆಟ್ಟಿ ಕೊಲ್ನಾಡು ಪ್ರಶ್ನಿಸಿದರು.
ಸಭೆಯಲ್ಲಿ ಮನೆ ಕಟ್ಟುವಾಗ ಸರಕಾರದ ನಿಯಮಗಳನ್ನು ಪಾಲಿಸಬೇಕು, ಕೆರೆಕಾಡು ಬಳಿ ಹಳೆ ವಿದ್ಯುತ್ ತಂತಿ ಬದಲಾಯಿಸಬೇಕು, ವಸತಿ ಯೋಜನೆ ಸ್ಥಗಿತಗೊಂಡಿದ್ದು ಫಲಾನುಭವಿಗಳು ತೊಂದರೆಯಲ್ಲಿದ್ದಾರೆ, ರೋಹನ್ ಎಸ್ಟೇಟ್ ಬಳಿ ಕೃಷಿ ಭೂಮಿಗೆ ಮಣ್ಣು ಬಿದ್ದಿದೆ ತೆರವುಗೊಳಿಸಿ ಎಂಬ ಆಗ್ರಹಗಳು ಕೇಳಿ ಬಂತು.
ಸಭೆಯಲ್ಲಿ ಎಸ್ಸಿ ಎಸ್ಟಿ, ವೈದ್ಯಕೀಯ ವೆಚ್ಚ, ಅಂತ್ಯಸಂಸ್ಕಾರ ಸಹಾಯಧನದ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಹೇಮನಾಥ ಜಿ ಅಮೀನ್, ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್, ಮೋಹನ್ ದಾಸ್ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.



