ಪುತ್ತೂರು; ಪ್ರಸ್ತುತ ಒಂದೆಡೆ ಬರ, ಇನ್ನೊಂದೆಡೆ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರಾಜ್ಯ ಸರಕಾರ ನೀಡಿರುವ ಭರವಸೆಗಳು ಹುಸಿ ಭರವಸೆಯಾಗಿಸುವುದರ ಜತೆಗೆ ರೈತರಿಗೆ ಪಂಗನಾಮ ಹಾಕುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಇವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ನೀಡುತ್ತಿರುವ ಬಡ್ಡಿರಹಿತ ಸಾಲವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ಶೇ.3 ರ ಬಡ್ಡಿದರದಲ್ಲಿ ನೀಡುವ ಸಾಲ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆ ಮಾಡಿದರೂ ತಿಂಗಳು ಎರಡು ಕಳೆಯಿತು. ಇನ್ನೂ ಜಾರಿಯಾಗಿಲ್ಲ. ಹಾಲು ಉತ್ಪಾದಕರಿಗೆ ಪ್ರತೀ ಲೀ.ಗೆ 5 ರಿಂದ 7 ರೂಪಾಯಿಗೆ ಹೆಚ್ಚಳ, ಜಾನುವಾರು ಖರೀದಿಗೆ ಶೂನ್ಯ ಬಡ್ಡಿಯಲ್ಲಿ ಮೂರು ಲಕ್ಷದ ವರೆಗೆ ಸಾಲ, ಮೀನುಗಾರ ಮಹಿಳೆಯರಿಗೆ 3 ಲಕ್ಷ ಬಡ್ಡಿರಹಿತ ಸಾಲ ಘೋಷಣೆಯಾಗಿಯೇ ಉಳಿದಿದೆ ಎಂದು ತಿಳಿಸಿದ ಅವರು, ಈ ಹಿಂದೆ ದ.ಕ.ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷ ರೈತರಿಗೆ ಕೇಂದ್ರ ಸರಕಾರದಿಂದ ನೀಡುವ ಕಿಸಾನ್ ಸಮ್ಮಾನ್ ನಿಧಿ 6000 ಹಾಗೂ ರಾಜ್ಯ ಸರಕಾರದ 4000 ಒಟ್ಟು 10 ಸಾವಿರ ನೀಡುತ್ತಿತ್ತು. ಅದನ್ನು ರಾಜ್ಯ ಸರಕಾರ ನಿಲ್ಲಿಸಿದೆ. ಅಲ್ಲದೆ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ದ.ಕ.ಜಿಲ್ಲೆಯಲ್ಲಿ ಸುಮಾರು 24 ಸಾವಿರ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ರೈತನಿಧಿ ಯಾವೊಬ್ಬ ರೈತನ ಮಕ್ಕಳಿಗೆ ಪಾವತಿಯಾಗಿಲ್ಲ. ತಕ್ಷಣ ಎಲ್ಲಾ ಭರವಸೆಗಳನ್ನು ಈಡೇರಿಸುವಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರ ಇದ್ದಾಗ ರೈತರ ಕೃಷಿ ಪಂಪುಗಳಿಗೆ ದಿನದ 24 ಗಂಟೆಯೂ ವಿದ್ಯುತ್ ನೀಡುತ್ತಿದ್ದು, ಇದೀಗ ರಾಜ್ಯ ಸರಕಾರ ದಿನ 7 ದಿನವೂ ವಿದ್ಯುತ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ರೈತ ಇಂದು ಕತ್ತಲೆಯಲ್ಲಿದ್ದು, ಕೃಷಿ ಕಾರ್ಯ ಮಾಡಲೂ ಸಂಕಷ್ಟದಲ್ಲಿದ್ದಾನೆ. ರಾಜ್ಯ ಸರಕಾರ ರೈತರಿಗೆ ಭರವಸೆಗಳನ್ನು ನೀಡಿ ಚಳ್ಳೆಹಣ್ಣು ತಿನ್ನಿಸುವ ಕೆಲಸ ಮಾಡಿ ಸಾಲದ ಕೂಪಕ್ಕೆ ತಳ್ಳುವ ಕೆಲಸ ಮಾಡುತ್ತಿದೆ. ಒಟ್ಟಾರೆಯಾಗಿ ರೈತ ವಿರೋಧಿ ಸರಕಾರದ ಆಡಳಿತ ಮಾಡುತ್ತಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ರೈತರ ಭವರಸೆಗಳನ್ನು ಈಡೇರಿಸದೇ ಹೋದರೆ ಮುದೊಂದು ದಿನ ರೈತರು ಬೀದಿಗಿಳಿದು ಹೋರಾಡುವ ಅನಿವಾರ್ಯತೆ ಬರಬಹುದು. ಈ ನಿಟ್ಟಿನಲ್ಲಿ ಭರವಸೆ ಈಡೇರಿಸುವ ಜತೆಗೆ ಕೇಂದ್ರದ ಸರಕಾರ ನೀಡುವ ಯೋಜನೆಗಳಿಗೆ ಸಾಥ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್ಕೆಎಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ, ಪೊಡಿಯ, ಕೆ.ವಿ.ಪ್ರಸಾದ್ ಉಪಸ್ಥಿತರಿದ್ದರು.



