ಕಾಪು: ನಾಗಸ್ವರ ವಾದಕ ಶೇಖ್ ಜಲೀಲ್ ಸಾಹೇಬ್ (56) ಅವರು ಸೋಮವಾರ ಹೃದಯಾಘಾತದಿಂದ ನಿಧನ ಹೊಂದಿದರು.

ಇಂದು ಮುಂಜಾನೆ ನಾಗಸ್ವರ ಹೆಗಲಿಗೇರಿಸಿಕೊಂಡು ಮನೆಯಿಂದ ಹೊರಗೆ ಹೋಗಿದ್ದರು. ಹೋಟೇಲ್ ನಲ್ಲಿ ಚಹಾ ಕುಡಿಯಲು ಕುಳಿತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಜಲೀಲ್ ಸಾಹೇಬ್ ಅವರು ಶನಿವಾರ ಕೊಪ್ಪಲಂಗಡಿಯಲ್ಲಿ ನಡೆದ ಮುಳ್ಳಮುಟ್ಟೆ, ಭಾನುವಾರ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ದೀಪಾವಳಿ ಸಂಭ್ರಮ ಮತ್ತು ಬಲಿ ಹೊರಡುವ ಸಂದರ್ಭದಲ್ಲೂ ನಾಗಸ್ವರ ಸೇವೆ ನೀಡಿದ್ದರು. ಕಾಪು ಸಾವಿರ ಸೀಮೆಯ ಒಡೆಯ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವರ ಸನ್ನಿಧಿ, ಕಾಪು ಮೂರನೇ ಮಾರಿಗುಡಿ ಸಹಿತ ಕಾಪು ಮಾರಿಯಮ್ಮ ದೇವಿ ಸನ್ನಿಧಿ ಹಾಗೂ ಕಾಪು ಸಾವಿರ ಸೀಮೆಯ ಹೆಚ್ಚಿನ ದೇವಸ್ಥಾನ, ಗರಡಿ, ದೇವಸ್ಥಾನಗಳಲ್ಲಿ ನಾಗಸ್ವರ ವಾದಕರಾಗಿ ಸೇವೆ ನೀಡುತ್ತಿದ್ದರು.
ಮೃತರು, ಪತ್ನಿ, ಮಗಳು, ಸಹೋದರ ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.



