ದಕ್ಷಿಣ ಕನ್ನಡ : ಜಿಲ್ಲೆಯಲ್ಲಿ ಅಡಿಕೆ ಹಿಂಗಾರ ಒಣಗುವ ಮತ್ತು ಎಳೆ ಅಡಿಕೆ ಉದುರುವಿಕೆ ಕುರಿತು ತಂತ್ರಜ್ಞಾನ ಪರಿಶೀಲನೆ ಕಾರ್ಯಕ್ರಮವನ್ನೂ ಭಾ.ಕೃ.ಅ.ಫ- ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು, ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಶ್ರೀ ಜಗದೀಶ್ ರೈ ರವರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರಿನ ಸಸ್ಯಸಂರಕ್ಷಣೆ ವಿಜ್ಞಾನಿಗಳಾದ ಡಾ.ಕೇದಾರನಾಥ ರವರು ಭಾಗವಹಿಸಿ ಅಡಿಕೆ ಬೆಳೆಯಲ್ಲಿ ಕಂಡು ಬರುವ ಹಿಂಗಾರ ಒಣಗುವ ರೋಗದ ಲಕ್ಷಣಗಳು (ಹಿಂಗಾರ ತುದಿ ಭಾಗದಿಂದ ಒಣಗುವುದು ಅಥವಾ ಕಪ್ಪಾಗುವುದು ಹಾಗೂ ಎಳೆ ಕಾಯಿ ಉದುರುವುದು) ಮತ್ತು ಅದರ ನಿರ್ವಹಣೆಯನ್ನು, ತೋಟದಲ್ಲಿರುವ ರೋಗ ಬಾಧಿತ ಹಿಂಗಾರಗಳನ್ನು ತೆಗೆದು ಮಣ್ಣಿನಲ್ಲಿ ಹೂತು ಹಾಕುವುದು. ಮಣ್ಣು ಪರೀಕ್ಷೆ ಆಧಾರಿತ ರಸಗೊಬ್ಬರಗಳನ್ನು ಬಳಸುವುದು, ಜೈವಿಕ ಸೂಕ್ಷ್ಮಾಣು ಟ್ರೈಕೊಡರ್ಮವನ್ನು ಪ್ರತಿ ಲೀಟರ್ ನೀರಿನಲ್ಲಿ 10 ಗ್ರಾಂ ನಂತೆ ಬೆರಸಿ ಸಿಂಪರಣೆ ಮಾಡುವುದು ಅಥವಾ ಪ್ರೋಪಿಕೊನಾಜೋಲ್ 25% ಇಸಿ ಯನ್ನೂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಎಲೆ ಮತ್ತು ಹಿಂಗಾರಕ್ಕೆ ಸಿಂಪರಣೆ ಮಾಡುವುದು. ಹಾಗೂ 30 ದಿನಗಳ ನಂತರ ಎರಡನೇ ಸಿಂಪರಣೆಯಾಗಿ ಕಾರ್ಬೆಂಡಜಿಯಮ್ 12%+ಮ್ಯಾಂಕೋಜೆಬ್ 63% ನ್ನು ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ ಬೆರಸಿ ಹಿಂಗಾರ ಮತ್ತು ಎಳೆಗಳಿಗೆ ಸಿಂಪರಣೆ ಮಾಡುವುದರಿಂದ ಹಿಂಗಾರ ಒಣಗುವ ರೋಗ ಮತ್ತು ಎಲೆ ಚುಕ್ಕೆ ರೋಗಗಳನ್ನು ನಿರ್ವಹಣೆ ಮಾಡಬಹುದು ಎಂದು ಹೇಳಿದರು. ಡಾ.ಮಲ್ಲಿಕಾರ್ಜುನ್ ಎಲ್ ಮಣ್ಣು ವಿಜ್ಞಾನಿಗಳು ಮಣ್ಣು ಪರೀಕ್ಷೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು. ಶ್ರೀ ಜಗದೀಶ್ ರೈ ರವರು ವಿಜ್ಞಾನಿಗಳನ್ನು ಹಾಗೂ ಕೃಷಿಕರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಒಟ್ಟು 20 ರೈತರು ಭಾಗವಹಿಸಿದ್ದರು ಹಾಗೂ ಆಯ್ದ 05 ರೈತರಿಗೆ ಕೃಷಿ ಪರಿಕಗಳನ್ನು ವಿತರಿಸಲಾಯಿತು.




