ಮಂಗಳೂರು:ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದ ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಅಶಕ್ತರಿಗೆ ನೆರವಾಗುವ ಮೂಲಕ ಸಾಕಷ್ಟು ಪುಣ್ಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಅಂತೆಯೇ ಈ ಪುಣ್ಯ ಕಾರ್ಯಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.


ಹೌದು, ಉಡುಪಿ ಜಿಲ್ಲೆಯ ಹಾವಂಜೆ ಕೀಳಿಂಜೆಯ ಛಾಯಾಗ್ರಾಹಕರಾದ ಗಣೇಶ್ ಶೆಟ್ಟಿಯವರ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿ ಮತ್ತು ಅವರ ಮಗಳಾದ ಪ್ರತಿಭಾವಂತೆ ಕರಾಟೆ ಪಟು ರಿಯಾಳ ಕ್ರೀಡಾ ಚಟುವಟಿಕೆಗೆ ಆರ್ಥಿಕ ಸಹಾಯ ಒದಗಿಸುವಂತೆ ಮನವಿ ಮಾಡಿದ ಹಿನ್ನೆಲೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಅತ್ಯಂತ ತುರ್ತಾಗಿ ಸ್ಪಂದಿಸಿ, ಮಾನವೀಯ ನೆಲೆಯಲ್ಲಿ ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಅಂತೆಯೇ ಮಂಗಳೂರಿನ ಬಲ್ಕುಂಜೆ ನಿವಾಸಿಯಾದ ಗುಲಾಬಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು, ಅವರಿಗೆ ಮನೆ ನಿರ್ಮಾಣಕ್ಕೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಗುಲಾಬಿಯವರಿಗೆ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಹಸ್ತಾಂತರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯವನ್ನು ಮಾಡಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿಯವರು ಉಪಸ್ಥಿತರಿದ್ದರು.



