ಗುಜರಾತ್:ಮಹಿಳಾ ಉದ್ಯಮಿ ಹಾಗೂ ಆಕೆಯ 6 ಸಹಚರರು ದಲಿತ ವ್ಯಕ್ತಿಯೊಬ್ಬನ ಮೇಲೆ ದೌರ್ಜನ್ಯ ಎಸಗಿದ ಘಟನೆ ಗುಜರಾತ್ ರಾಜ್ಯದ ಮೊರ್ಬಿ ನಗರದಲ್ಲಿ ನಡೆದಿದೆ.


ಸಂಬಳ ನೀಡುವಂತೆ ಒತ್ತಾಯ ಮಾಡಿದ ಎಂದು ಸಿಟ್ಟಿಗೆದ್ದ ಮಹಿಳೆ, ತನ್ನ ಕಂಪನಿಯ ಇತರ ಕಾರ್ಮಿಕರ ನೆರವು ಪಡೆದು 21 ವರ್ಷ ವಯಸ್ಸಿನ ದಲಿತ ಯುವಕನ ಬಾಯಿಗೆ ತನ್ನ ಚಪ್ಪಲಿಯನ್ನು ತುರುಕಿ, ಇತರ ನೌಕರರಿಂದ ಬೆಲ್ಟ್ ನಿಂದ ಹೊಡೆಸಿದ ಹೇಯ ಘಟನೆ ನಡೆದಿದೆ. ರಾಣಿಬಾ ಇಂಡಸ್ಟ್ರೀಸಿ ಎಂಬ ಸೆರಾಮಿಕ್ ಕಂಪನಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನಿಲೇಶ್ ದಾಲ್ಮಾನಿಯಾ ಎಂಬ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ವಜಾಗೊಳಿಸಲಾಗಿತ್ತು. ಬಳಿಕ ಆ 18 ದಿನಗಳ ತನ್ನ ಕೆಲಸಕ್ಕೆ ನೀಡಬೇಕಾಗಿದ್ದ ಸಂಬಳ ಕೇಳಲು ನಿಲೇಶ್ ತನ್ನ ಇಬ್ಬರು ಸ್ನೇಹಿತರೊಂದಿಗೆ ರಾಣಿಬಾ ಇಂಡಸ್ಟ್ರೀಸಿ ಗೆ ತೆರಳಿದ ವೇಳೆ ನಿಲೇಶ್‌ನನ್ನು ಕಂಡು ಕೋಪಗೊಂಡ ರಾಣಿಬಾ ಮತ್ತು ಆಕೆಯ ಸಹಾಯಕ ಮೊದಲು ಮೂವರಿಗೂ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಅಲ್ಲಿದ್ದ ಐವರು ಇತರ ಆರೋಪಿಗಳು ನಿಲೇಶ್‌ಗೆ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ನಿಲೇಶ್ ದಲಿತ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ನಿಲೇಶ್ ಹಾಗೂ ಆತನ ಜೊತೆಗಾರರಿಗೆ ಥಳಿಸಿದ ಆರೋಪದ ಮೇಲೆ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.



