ಬಂಟ್ವಾಳ: ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಎಸ್.ವಿಜಯಪ್ರಸಾದ್ ಇಂದು ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿದ್ದ ಪ್ರತಾಪ್ ಸಿಂಗ್ ರಾಠೋಡ್ ಅವರು ಬೆಂಗಳೂರು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ವಿಜಯಪ್ರಸಾದ್ ಅವರನ್ನು ನೇಮಕಗೊಳಿಸಿ ಆದೇಶಹೊರಡಿಸಿತ್ತು. ಇದೀಗ ಅವರನ್ನು ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ನೇಮಕಗೊಳಿಸಲಾಗಿದೆ.

ಮೂಲತಃ ಉಡುಪಿ ಜಿಲ್ಲೆಯ ಸಾಲಿಗ್ರಾಮವಾಗಿದ್ದು, ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಪ್ರಮುಖ ಮತ್ತು ಸೂಕ್ಷ್ಮ , ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವಿ ಹಾಗೂ ಜನಮನ್ನಣೆ ಗಳಿಸಿದ ಅಧಿಕಾರಿಯಾಗಿರುತ್ತಾರೆ. ಡಿ.ವೈ.ಎಸ್.ಯಾಗಿ ಭಡ್ತಿ ಹೊಂದಿದ ಮೇಲೆ ಅವರು ಲೋಕಾಯುಕ್ತದಲ್ಲಿ ಕರ್ತವ್ಯ ಮಾಡಿದ ಬಳಿಕ ಕಾರ್ಕಳ ತಾಲೂಕಿನಲ್ಲಿ ಡಿ.ವೈ.ಎಸ್.ಪಿ.ಯಾಗಿ ಕೆಲಸ ಮಾಡಿದ ಅನುಭವಿ. ಚುನಾವಣಾ ಸಂದರ್ಭದಲ್ಲಿ ಇವರನ್ನು ಚುನಾವಣಾ ನಿಯಮದಂತೆ ಕಾರವಾರ ಜಿಲ್ಲೆಗೆ ವರ್ಗಾವಣೆಗೊಳಿಸಲಾಗಿತ್ತು.
ಚುನಾವಣೆ ಮುಗಿದ ಬಳಿಕ ರಾಜ್ಯ ಸರಕಾರದ ಆದೇಶದಂತೆ ಇವರನ್ನು ಬಂಟ್ವಾಳಕ್ಕೆ ವರ್ಗಾವಣೆಗೊಳಿಸಲಾಗಿದೆ.
ಹಲವಾರು ವರ್ಷಗಳ ಹಿಂದೆ ದ.ಕ.ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ಉಪವಿಭಾಗವಾಗಿ ಹೊಸದಾಗಿ ಸೃಜನೆಗೊಂಡ ಪೋಲೀಸ್ ಉಪವಿಭಾಗದ ಪೋಲೀಸ್ ಉಪಾಧೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.
ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ವಿಜಯಪ್ರಸಾದ್ ಅವರ ಹುಟ್ಟೂರು ಕೋಟ ಸಮೀಪದ ಸಾಲಿಗ್ರಾಮವಾಗಿದ್ದು, ಇವರು ಪದವಿ ವ್ಯಾಸಂಗ ಮುಗಿಸಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ.ಇಲ್ಲಿನ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದರು.
ಕಾನೂನು ಸುವ್ಯವಸ್ಥೆಯ ಸವಾಲು ಬಂಟ್ವಾಳ ಡಿ.ವೈ.ಎಸ್.ಪಿ.ಯ ಮುಂದೆ
ಕೋಮು ಸೂಕ್ಷ್ಮ ವಾಗಿರುವ ಬಂಟ್ವಾಳ ಇತ್ತೀಚಿನ ದಿನಗಳಲ್ಲಿ ಶಾಂತಿಯುತವಾಗಿದ್ದು, ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಜನಾಭಿಪ್ರಾಯ. ಇದಕ್ಕೆ ಪೂರಕವಾಗಿ ಬಂಟ್ವಾಳದಲ್ಲಿ ಖಡಕ್ ಪೋಲೀಸ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಬಂಟ್ವಾಳದಲ್ಲಿ ನಡೆಯುತ್ತಿರುವ ಆಕ್ರಮ ಚಟುವಟಿಕೆಗಳಿಗೆ ಶಾಶ್ವತ ಬ್ರೇಕ್ ಬೀಳಬೇಕಾಗಿದೆ. ಜೊತೆಗೆ ಶಾಂತಿ ಕೆಡಿಸುವ ಪುಂಡುಪೋಕರಿಗಳಿಗೆ ಬಿಸಿಮುಟ್ಟಿಸುವ ಕಾರ್ಯ ಹೊಸ ಪೋಲೀಸ್ ಅಧಿಕಾರಿಯಿಂದ ಆಗಬೇಕಾಗಿದೆ.ಕಳೆದ ಕೆಲ ದಿನಗಳಲ್ಲಿ ಹುಲಿವೇಷ, ದುರುಗಟ್ಟಿನೋಡಿದ್ದಾರೆ, ಹೀಗೆ ಕ್ಷುಲ್ಲಕ ಕಾರಣಗಳಿಗಾಗಿ ಯುವಕರ ಮಧ್ಯೆ ಹೊಡೆದಾಟಗಳು ಸದ್ದಿಲ್ಲದೆ ನಡೆದರೆ, ಸಾಮಾಜಿಕ ಜಾಲತಾಣದಲ್ಲಿ ವಾರ್ ಗಳು ನಡೆಯುತ್ತಿದೆ. ಇದೆಲ್ಲದ್ದಕ್ಕೆ ಕಡಿವಾಣ ಬೀಳಬೇಕಾಗಿದೆ. ಯಾಕೆಂದರೆ ಲೋಕಸಭಾ ಚುನಾವಣೆ ಸಮೀಪಸುತ್ತಿದ್ದಂತೆ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಶಾಂತಿ ಭಂಗಕ್ಕೆ ಪ್ರಯತ್ನಗಳು ನಡೆಯುವ ಹುನ್ನಾರಗಳು ನಡೆಯುತ್ತಿರುವುದರಿಂದ ಹೊಸದಾಗಿ ಅಧಿಕಾರ ಪಡೆದುಕೊಂಡ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.



