ಕಾಲು ಟಚ್ ಆಯಿತೆಂಬ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಶಿಕುಮಾರ್ ಕೊಲೆಯಾದ ವ್ಯಕ್ತಿ. ಮಂಜುನಾಥ್ ಮತ್ತು ಭಾಗ್ಯರಾಜ್ ಕೊಲೆಗೈದ ಆರೋಪಿಗಳು. ಕಳೆದ ಮಾರ್ಚ್ 2 ರಂದು ಶಿವನಹಳ್ಳಿ ಪ್ರದೇಶದ ಹೋಟೆಲ್‌ನಲ್ಲಿ ಶಶಿಕುಮಾರ್ ದೋಸೆ ತಿನ್ನುತ್ತಿದ್ದ. ಮಂಜುನಾಥ್ ಸಹ ಅದೇ ಹೋಟೆಲ್‌ಗೆ ಬಂದಿದ್ದ. ಈ ವೇಳೆ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ಕುಮಾರ್ ತುಳಿದಿದ್ದಾನೆ. ಇದೇ ವಿಚಾರ ಜಗಳಕ್ಕೆ ಕಾರಣವಾಗಿದೆ. ಮಂಜುನಾಥ್ ಸಹೋದರ ಭಾಗ್ಯರಾಜ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಇಬ್ಬರು ಶಶಿಕುಮಾರ್ ಜೊತೆ ಜಗಳವಾಡಿದ್ದಾರೆ. ರೊಚ್ಚಿಗೆದ್ದ ಭಾಗ್ಯರಾಜ್, ಶಶಿಕುಮಾರ್ ಕತ್ತಿಗೆ ಚಾಕು ಇರಿದು ಕೊಂದೇ ಬಿಟ್ಟಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.



