ಕಾರು ಮತ್ತು ಬೈಕ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ನಡೆದಿದೆ.

ಮುಂಡರಗಿ ತಾಲೂಕಿನ ಜಂತ್ತಿ ಶಿರೂರ ಗ್ರಾಮದ ನಿವಾಸಿಗಳಾದ, ಶಿವಪ್ಪ ಪಾಟ್ಲಿ, ಮುತ್ತಪ್ಪ ಮುದುಗಣ್ಣವರ್ ಮತ್ತು ಆನಂದ ಲಕ್ಷ್ಮೀಶ್ವರಮಠ ಮೃತಪಟ್ಟವರು. ಮುಂಡರಗಿ ಬಳಿಯ ಮೇವುಂಡಿ – ಬರದೂರು ಗ್ರಾಮಗಳ ಮಧ್ಯದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಮುಂಡರಗಿ ಪಟ್ಟಣದಿಂದ ಒಂದೇ ಬೈಕ್ನಲ್ಲಿ ಮೂವರು ಯುವಕರು ಜಂತ್ತಿ ಗ್ರಾಮಕ್ಕೆ ತೆರಳುತ್ತಿದ್ದಾಗ, ಎದುರಿನಿಂದ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರರ ಅತಿವೇಗ ಮತ್ತು ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮುತ್ತಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಂಡರಗಿ ಪೊಲೀಸರು ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.



