ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್‌ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಅದರ್ಶ್ ನೇತ್ರತ್ವದಲ್ಲಿ ಟ್ರಾಫಿಕ್ ಪೋಲೀಸರ ತಂಡ ಪರಿಶೀಲನೆ ನಡೆಸಿವೆ.

ಬೆಳಿಗ್ಗೆ 6 ಗಂಟೆಯಿಂದಲೇ ಸ್ವತಃ ಟ್ರಾಫಿಕ್ ಎಸ್.ಐ. ಆದರ್ಶ್ ಅವರೇ ಫೀಲ್ಡಿಗಿಳಿದು ಶಾಲಾ ಬಸ್‌ಗಳನು ಬಿಸಿರೋಡಿನ ಸರ್ಕಲ್ ಬಳಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಪ್ರತಿಯೊಂದು ಬಸ್‌ಗಳ ದಾಖಲೆ ಸಹಿತ ಇತರ ನಿಯಮಗಳನ್ನು ಅನುಸರಿಸುತ್ತಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಂಡರು. ಕಾನೂನು ಪಾಲಿಸದ ಚಾಲಕರಿಗೆ ಹಾಗೂ ನಿಯಮಾನುಸಾರ ಇಲ್ಲದಿರುವ ಬಸ್‌ಗಳಿಗೆ ಕೇಸು ಹಾಕಿ ಎಚ್ಚರಿಕೆ ನೀಡಿದ್ದಾರೆ. ಸುಮಾರು 20 ಪ್ರಕರಣಗಳು ಒಂದೇ ದಿನದಲ್ಲಿ ದಾಖಲು ಮಾಡಿದ್ದಾರೆ.

ಅದರಲ್ಲಿ ಯೂನಿಫಾರ್ಮ್ ಹಾಕದೆ ವಾಹನ ಚಲಾಯಿಸುವ ಆರು ಚಾಲಕರು, ಆರ್.ಟಿ.ಒ.ಇಲಾಖೆ ನಿಗದಿಪಡಿಸಿದ ಸೀಟುಗಳನ್ನು ಹೊರತುಪಡಿಸಿ, ಹೆಚ್ಚುವರಿಯಾಗಿ ಮಕ್ಕಳನ್ನು ಬಸ್‌ಗಳಲ್ಲಿ ತುಂಬಿಸಿಕೊಂಡು ಹೋಗುವ ನಾಲ್ಕು ಶಾಲಾ ಬಸ್‌ಗಳಿಗೆ, ವಾಹನದ ಪಿಟ್‌ನೆಸ್ ಪ್ರಮಾಣ ಪತ್ರದ ಅವಧಿ ಮುಗಿದ ಒಂದು ಬಸ್ ಹಾಗೂ ದಾಖಲೆಗಳಿಲ್ಲದೆ ವಾಹನಗಳಿಗೆ ಕೇಸು ದಾಖಲು ಮಾಡಿದ್ದಾರೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳಲ್ಲಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಲಾಖೆಯ ನಿಯಮಗಳನ್ನು ಅಗತ್ಯವಾಗಿ ಪಾಲಿಸಬೇಕಿದೆ. ಮಳೆಗಾಲದಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು, ಚಾಲಕರು ಮುಂಜಾಗ್ರತಾ ಕ್ರಮವನ್ನು ಅನುಸರಿಸಲೇ ಬೇಕು. ಒಂದು ವೇಳೆ ಕಾನೂನು ಮೀರಿ ನಿಯಮಗಳನ್ನು ಪಾಲಿಸದೇ ವಾಹನ ಚಲಾಯಿಸುವ ಸ್ಕೂಲ್ ಬಸ್ ಹಾಗೂ ಚಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಟ್ರಾಫಿಕ್ ಎಸ್.ಐ.ಅದರ್ಶ್ ತಿಳಿಸಿದ್ದಾರೆ.



