ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ – ಬಂಟ್ವಾಳ ಉಪ ವಿಭಾಗ, ಬಂಟ್ವಾಳ ನಗರ ಪೊಲೀಸ್ ಠಾಣೆ, ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತರಾಷ್ಟ್ರೀಯ ದಿನ – ಜನಜಾಗೃತಿ ಅಭಿಯಾನ – 2026 ಕಾರ್ಯಕ್ರಮ ಲಯನ್ಸ್ ಕ್ಲಬ್ ಬಂಟ್ವಾಳ ದಲ್ಲಿ ನಡೆದಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಬಂಟ್ವಾಳ ಉಪವಿಭಾಗದ ಎ.ಎಸ್.ಪಿ. ಯಶ್ ಕುಮಾರ್ ಶರ್ಮಾ ಐ.ಪಿ.ಎಸ್ ಅವರು ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಸದಾ ಜಾಗೃತಿಯಿಂದ ಇರುವಂತೆ ಹಾಗೂ ಬಂಟ್ವಾಳವನ್ನು ಡ್ರಗ್ಸ್ ಮುಕ್ತಗೊಳಿಸುವಲ್ಲಿ ಯುವ ಸಮುದಾಯವು ಸಕ್ರಿಯವಾಗಿ ಭಾಗಿಯಾಗಿ ಪೊಲೀಸ್ ಇಲಾಖೆಯ ಜೊತೆ ಸಹಕರಿಸುವಂತೆ ಕರೆ ನೀಡಿರುತ್ತಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತಾಲೂಕು ಆಸ್ಪತ್ರೆಯ ಆಪ್ತಸಮಾಲೋಚಕರಾದ ಅಕ್ಷತಾ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು ಇದರ ಆಪ್ತ ಸಮಾಲೋಚಕಿ ದಿವ್ಯಾ ಎನ್ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಕೆ.ವಿ, ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ರೋಟರಿ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.



