ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು ಇರಿಸಿ ನಿಗಾ ವಹಿಸಿದೆ.

ತಾಲೂಕಿನ ಪರ್ಲಾ ಚರ್ಚ್ ಸಮೀಪ ಹಾಗೂ ವಗ್ಗ ಸಮೀಪದ ಪಚ್ಚಾಜೆಯಲ್ಲಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಪಚ್ಚಾಜೆಯಲ್ಲಿ ಸುಮಾರು 10 ದಿನಗಳ ಹಿಂದೆ ಬೋನು ಇರಿಸಲಾಗಿದ್ದು, ಪರ್ಲಾ ಚರ್ಚ್ ಬಳಿಯಲ್ಲಿ ವಾರದ ಹಿಂದೆ ಬೋನು ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಪಚ್ಚಾಜೆ ಪರಿಸರದಲ್ಲಿ ಎರಡು ದಿನಗಳ ಹಿಂದೆ ಮುಂಜಾನೆ ಶಾಲೆಗೆ ತೆರಳುತ್ತಿದ್ದ ಬಾಲಕನಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಅರಣ್ಯ ಇಲಾಖೆಗೆ ಮಾಹಿತಿ ಹಾಗೂ ದೂರುಗಳು ಬಂದ ಹಿನ್ನೆಲೆಯಲ್ಲಿ ಬೋನು ಇರಿಸಲಾಗಿದೆ ಎನ್ನಲಾಗಿದೆ.
ಬೋನು ಅಳವಡಿಸಿದ ಬಳಿಕವೂ ಚಿರತೆ ಇದೇ ಪರಿಸರದಲ್ಲಿ ಓಡಾಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದು, ಇದುವರೆಗೆ ಬೋನಿಗೆ ಸಿಕ್ಕಿಬಿದ್ದಿಲ್ಲ. ಇದರಿಂದ ರಾತ್ರಿ ಸಂಚರಿಸುವವರು ಹಾಗೂ ಮುಂಜಾನೆ ಶಾಲೆ, ಕೆಲಸಕ್ಕೆ ತೆರಳುವವರು ಆತಂಕದಲ್ಲಿದ್ದಾರೆ.

ಇದೇ ವೇಳೆ ಸರಪಾಡಿ ಸಮೀಪದಲ್ಲಿಯೂ ಚಿರತೆ ಸುಳಿವು ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭಿಸಿದೆ. ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಚಿರತೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಚಿರತೆ ಓಡಾಟದ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ರಾತ್ರಿ ಮತ್ತು ಮುಂಜಾನೆ ವೇಳೆ ಒಂಟಿಯಾಗಿ ಸಂಚರಿಸದೆ ಮುನ್ನೆಚ್ಚರಿಕೆ ವಹಿಸುವಂತೆ ಸ್ಥಳೀಯರು ಕೋರಿದ್ದಾರೆ.



