ಸುರತ್ಕಲ್ ಸಮೀಪದ ಮಾದವ ನಗರದ ವೆಟ್‌ವೆಲ್ ಒಳಗಿರುವ ಎಸ್‌ಟಿಸಿ ಆವರಣದಲ್ಲಿ ಪೂರ್ವಾನುಮತಿ ಪಡೆಯದೆ ಮರಗಳನ್ನು ಕಡಿದು ಸಾಗಿಸಿರುವ ಆರೋಪ ಕೇಳಿಬಂದಿದೆ.

ಈ ಕುರಿತು ದೂರು ದಾಖಲಿಸಿ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಆಗ್ರಹಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಬಂಧಪಟ್ಟ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಯಾವುದೇ ಮಾಹಿತಿ ನೀಡದೆ, ಅರಣ್ಯ ಕಾಯ್ದೆಯಡಿ ಅಗತ್ಯ ಅನುಮತಿ ಪಡೆಯದೇ ವಿವಿಧ ಜಾತಿಯ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ಆರೋಪಿಸಿದರು.

ಮರಗಳನ್ನು ಲಾರಿಗೆ ತುಂಬುವ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಪೊರೇಟರ್ ಹಾಗೂ ರಾಜ್ಯ ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ಶ್ವೇತಾ ಪೂಜಾರಿ, ಗುತ್ತಿಗೆದಾರರಾದ ಪುರುಷೋತ್ತಮ, ಮಂಗಳೂರು ಉತ್ತರ ಬ್ಲಾಕ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಹಾಗೂ ಮಹಾನಗರ ಪಾಲಿಕೆಯ ವೆಟ್‌ವೆಲ್ ಜೂನಿಯರ್ ಎಂಜಿನಿಯರ್ ಯತೀಶ್ ಅವರು ಸ್ಥಳದಲ್ಲಿರುವ ಫೋಟೋಗಳು ಲಭ್ಯವಾಗಿವೆ ಎಂದು ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಸುರತ್ಕಲ್ ಮಹಾನಗರ ಪಾಲಿಕೆ ಉಪಕಚೇರಿ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಕಡಿದ ಮರಗಳನ್ನು ಬೇರೆಡೆಗೆ ಸಾಗಿಸಿರುವುದು ತಿಳಿದುಬಂದಿದೆ ಎಂದು ಅವರು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೂ ದೂರು ನೀಡಲಾಗಿದೆ. ಮರ ಕಡಿತ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಂ.ಜಿ. ಹೆಗಡೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಕುಂತಳಾ ಕಾಮತ್ ಹಾಗೂ ಸಾರೀಕ ಪೂಜಾರಿ ಉಪಸ್ಥಿತರಿದ್ದರು.



