ಬಿ.ಸಿ.ರೋಡು-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿಯಲ್ಲಿ ರಸ್ತೆ ಬದಿಯ ತೋಡಿನಲ್ಲಿ ಪ್ರಾಣಿಗಳ ತ್ಯಾಜ್ಯ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಯಾವುದೋ ಪ್ರಾಣಿಯನ್ನು ವಧೆ ಮಾಡಿದ ಬಳಿಕ ಅದರ ಕರುಳು ಸೇರಿದಂತೆ ಇತರ ತ್ಯಾಜ್ಯ ಭಾಗಗಳನ್ನು ತಂದು ರಸ್ತೆ ಬದಿಯ ತೋಡಿಗೆ ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ತೆಯಾಗಿರುವ ತ್ಯಾಜ್ಯ ವಸ್ತುಗಳ ಬಗ್ಗೆ ಅನುಮಾನಗಳಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ನಾವೂರು, ತ್ಯಾಜ್ಯ ಯಾವ ಪ್ರಾಣಿಯ ಅವಶೇಷಗಳು ಎಂಬುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದಲ್ಲಿ ವೈದ್ಯಕೀಯ ಅಥವಾ ವೈಜ್ಞಾನಿಕ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳಿಂದ ಪ್ರಾಣಿಗಳ ತ್ಯಾಜ್ಯವನ್ನು ತಂದು ಇಲ್ಲಿ ಎಸೆದಿರಬಹುದೆಂಬ ಶಂಕೆಯೂ ಇದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಈಗಾಗಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದಿರುವ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರು ಪತ್ತೆಯಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



