ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಆಸ್ಪತ್ರೆಯೊಂದರಲ್ಲಿ ಎಸಿ ಕಂಪ್ರೆಸರ್ ಸ್ಫೋಟಗೊಂಡು ಭಾರೀ ದುರಂತ ಸಂಭವಿಸಿದೆ. ಘಟನೆಯಲ್ಲಿ ಸುಮಾರು 15 ನವಜಾತ ಶಿಶುಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸ್ತ್ರೀರೋಗ ಶಾಸ್ತ್ರ ವಾರ್ಡ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನರ್ಸರಿಯಲ್ಲಿದ್ದ ಹವಾನಿಯಂತ್ರಣ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ವೇಳೆ ನರ್ಸರಿಯಲ್ಲಿ ಒಟ್ಟು 16 ನವಜಾತ ಶಿಶುಗಳು ಇದ್ದವು ಎಂದು ಪಿಐಎಂಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸ್ತ್ರೀರೋಗ ಶಾಸ್ತ್ರ ವಾರ್ಡ್ನಲ್ಲಿದ್ದ ನವಜಾತ ಶಿಶುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಯಿತು.
ಆದರೆ, ರಕ್ಷಣಾ ಕಾರ್ಯಾಚರಣೆಯ ನಡುವೆಯೂ 15 ನವಜಾತ ಶಿಶುಗಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಒಂದೇ ಒಂದು ಮಗು ಬದುಕುಳಿದಿದೆ ಎಂದು ತಿಳಿದುಬಂದಿದೆ.
ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯಬೇಕಿದ್ದು, ಆಸ್ಪತ್ರೆಯ ಸುರಕ್ಷತಾ ವ್ಯವಸ್ಥೆ ಕುರಿತಂತೆಯೂ ಪ್ರಶ್ನೆಗಳು ಎದ್ದಿವೆ.



