ಬಿ.ಸಿ.ರೋಡ್ನಿಂದ ಕಣ್ಣಿಗೆ ಕಾಣುವಷ್ಟು ಸಮೀಪದಲ್ಲಿರುವ ಪ್ರದೇಶಗಳನ್ನು ತಲುಪಲು ಸುತ್ತು ಬಳಸಿ 7ರಿಂದ 8 ಕಿ.ಮೀ. ಪ್ರಯಾಣಿಸಬೇಕಾದ ಪರಿಸ್ಥಿತಿ ಬಿ.ಮೂಡ ಗ್ರಾಮದ ಹಲವು ನಿವಾಸಿಗಳದ್ದು. ಮಂಗಳೂರು–ಬೆಂಗಳೂರು ರೈಲು ಮಾರ್ಗ ಗ್ರಾಮವನ್ನು ಹಾದುಹೋಗಿರುವುದರಿಂದ ಹಲವು ವರ್ಷಗಳಿಂದ ನೇರ ಸಂಪರ್ಕ ರಸ್ತೆ ಇಲ್ಲದೆ ಸ್ಥಳೀಯರು ಪರದಾಡುತ್ತಿದ್ದಾರೆ.

ಬಿ.ಸಿ.ರೋಡ್ ಬಸ್ ನಿಲ್ದಾಣದ ಸಮೀಪದ ಅಜ್ಜಿಬೆಟ್ಟು, ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ದೈಪಲ, ಕಾಮಾಜೆ ಮತ್ತು ಮೈರಾನ್ಪಾದೆ ಕಡೆಗೆ ವಾಹನದಲ್ಲಿ ನೇರವಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ರೈಲು ಹಳಿಯಿಂದ ಸಂಪರ್ಕ ಕಡಿತಗೊಂಡಿರುವುದರಿಂದ ವಾಹನಗಳು ಸುತ್ತು ಮಾರ್ಗದಲ್ಲಿ ಸಂಚರಿಸಬೇಕಾಗಿದೆ.
ಕಾಮಾಜೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿಗೆ ಬಿ.ಸಿ.ರೋಡ್ ಭಾಗದಿಂದ ಕಾಲ್ನಡಿಗೆಯಲ್ಲಿ ಅಲ್ಪ ದೂರದಲ್ಲೇ ತಲುಪಬಹುದಾದರೂ, ವಾಹನ ಸಂಚಾರಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸುತ್ತು ಮಾರ್ಗವನ್ನೇ ಅವಲಂಬಿಸಬೇಕಾಗಿದೆ. ಇದರಿಂದ ಸಮಯ ಮತ್ತು ಹಣ ಎರಡೂ ಹೆಚ್ಚಾಗಿ ವ್ಯಯವಾಗುತ್ತಿದೆ.

ಬಿ.ಸಿ.ರೋಡ್ ಬೈಪಾಸ್ನಿಂದ ಪೊಳಲಿ ರಸ್ತೆಯವರೆಗೆ ರೈಲು ಹಳಿ ಹಾದುಹೋಗಿರುವ ಪ್ರದೇಶದಲ್ಲಿ ಹಲವು ಕಡೆ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ರೈಲು ಹಳಿಯ ಎರಡೂ ಬದಿಯ ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಅಂಡರ್ಪಾಸ್ ಅಥವಾ ರೈಲ್ವೇ ಮೇಲ್ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.
ರೈಲು ಮಾರ್ಗದ ಕಾರಣ ಬಿ.ಮೂಡ ಗ್ರಾಮ ಭೌಗೋಳಿಕವಾಗಿ ಎರಡು ಭಾಗಗಳಾಗಿ ವಿಭಜನೆಯಾದಂತಾಗಿದೆ. ರೈಲು ಹಳಿಯ ಒಂದು ಬದಿಯ ಅಜ್ಜಿಬೆಟ್ಟು, ಸಂಚಯಗಿರಿ, ಕೈಕುಂಜೆ, ಕೊಡಂಗೆ ಮೊದಲಾದ ಪ್ರದೇಶಗಳು ವಿವಿಧ ಅಭಿವೃದ್ಧಿ ಸೌಲಭ್ಯಗಳನ್ನು ಪಡೆದಿದ್ದರೆ, ಮತ್ತೊಂದು ಭಾಗದಲ್ಲಿರುವ ದೈಪಲ, ಕಾಮಾಜೆ, ಮೈರಾನ್ಪಾದೆ ಸೇರಿದಂತೆ ಹಲವು ಪ್ರದೇಶಗಳು ನೇರ ಸಂಪರ್ಕದ ಕೊರತೆಯಿಂದ ಸಮಸ್ಯೆ ಎದುರಿಸುತ್ತಿವೆ.
ಈ ಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು, ಜನರು ಹಲವು ಸಂದರ್ಭಗಳಲ್ಲಿ ಕಾಲುದಾರಿ ಅಥವಾ ರೈಲು ಹಳಿಯ ಸಮೀಪದ ಮಾರ್ಗಗಳನ್ನು ಅವಲಂಬಿಸಬೇಕಾಗಿದೆ. ಪರ್ಯಾಯ ವಾಹನ ಸಂಪರ್ಕ ಕಲ್ಪಿಸಿದರೆ ಈ ಭಾಗದ ನಿವಾಸಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕುಂಭಾರ ಯಾನೆ ಮೂಲ್ಯ ಸಮುದಾಯದ ಹಲವು ಕುಟುಂಬಗಳ ಪಾರಂಪರಿಕ ನೆಲೆಯಾಗಿರುವ ಮಠ ಪ್ರದೇಶದಲ್ಲಿಯೂ ಇದೇ ಸಮಸ್ಯೆ ಮುಂದುವರಿದಿದೆ. ನೂರಾರು ಕುಟುಂಬಗಳು ವಾಸಿಸುವ ಈ ಪ್ರದೇಶದಲ್ಲಿ ಶ್ರೀ ಕುಂಭೋಧರಿ ದೇವಸ್ಥಾನ, ದೈವಸ್ಥಾನ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿವೆ.
ದೇವಸ್ಥಾನ ಹಾಗೂ ಕೆಲವು ಮನೆಗಳ ಮುಂಭಾಗದಲ್ಲೇ ರೈಲು ಹಳಿ ಹಾದುಹೋಗಿದ್ದು, ಹಳಿಯ ಇನ್ನೊಂದು ಬದಿಯಲ್ಲಿ ನಾಗಬನ, ಕೃಷಿ ಜಮೀನು ಹಾಗೂ ಕೆಲವು ಕುಟುಂಬಗಳ ಜಾಗಗಳಿವೆ. ಹೀಗಾಗಿ ಸ್ಥಳೀಯರು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಅನಿವಾರ್ಯವಾಗಿ ರೈಲು ಹಳಿ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ.
ರೈಲು ಸಂಚಾರ ಹೆಚ್ಚಿರುವುದರಿಂದ ಹಳಿ ದಾಟುವುದು ಅಪಾಯಕಾರಿಯಾಗಿದ್ದು, ಜನರ ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ತುರ್ತಾಗಿ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಳೀಯರ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅಜ್ಜಿಬೆಟ್ಟು ಶಾಲೆಯ ಬಳಿಯಿಂದ ದೈಪಲಕ್ಕೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ರೈಲ್ವೇ ಸೇತುವೆ ನಿರ್ಮಿಸುವುದು ಹಾಗೂ ಕುಂಭೋಧರಿ ಮಠ ದೇವಸ್ಥಾನದಿಂದ ಕುಲಾಲ ಭವನದ ಕಡೆಗೆ ಸಂಪರ್ಕ ಕಲ್ಪಿಸಲು ದೇವಸ್ಥಾನದ ಸಮೀಪ ಅಂಡರ್ಪಾಸ್ ನಿರ್ಮಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ರೈಲ್ವೇ ಇಲಾಖೆ ಸ್ಥಳ ಪರಿಶೀಲನೆ ನಡೆಸಿ, ಜನರ ಬಹುಕಾಲದ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.



