ಬಿ.ಸಿ.ರೋಡ್ನಿಂದ ಅಡ್ಡಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ರಸ್ತೆ ಬದಿಯಲ್ಲಿ ಬೀದಿ ದೀಪಗಳ ಕಂಬ ಹಾಗೂ ವಿದ್ಯುತ್ ವ್ಯವಸ್ಥೆ ಅಳವಡಿಸಲಾಗಿದ್ದರೂ, ದೀಪಗಳು ಮಾತ್ರ ಸಮರ್ಪಕವಾಗಿ ಬೆಳಗುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಹೆದ್ದಾರಿಯ ಬಹುತೇಕ ಭಾಗ ರಾತ್ರಿ ವೇಳೆ ಕತ್ತಲೆಯಲ್ಲೇ ಉಳಿಯುವಂತಾಗಿದೆ.

ಸುಮಾರು ಆರು ತಿಂಗಳ ಹಿಂದೆ ದೀಪಗಳನ್ನು ಪ್ರಾಯೋಗಿಕವಾಗಿ ಬೆಳಗಿಸಲಾಗಿತ್ತು. ಈ ವೇಳೆ ರಾತ್ರಿ ಹೆದ್ದಾರಿ ಬೆಳಕಿನಿಂದ ಕಂಗೊಳಿಸಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಪ್ರಾಯೋಗಿಕ ಬೆಳಕಿನ ವ್ಯವಸ್ಥೆ ಸ್ಥಗಿತಗೊಂಡಿದ್ದು, ಬಳಿಕ ದೀಪಗಳು ನಿರಂತರವಾಗಿ ಉರಿಯದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಕೆಎನ್ಆರ್ಸಿ ಕಂಪೆನಿ ಪ್ರಾಯೋಗಿಕ ಚಾಲನೆಯ ಸಂದರ್ಭದಲ್ಲಿ ಜನರೇಟರ್ ಬಳಸಿ ಹೆದ್ದಾರಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಿತ್ತು. ಒಂದು ದಿನ ದೀಪಗಳು ಬೆಳಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿತ್ತು. ಇದರಿಂದ ಶೀಘ್ರದಲ್ಲೇ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಿ ದೀಪಗಳನ್ನು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಮೂಡಿತ್ತು.

ಆದರೆ ಪ್ರಾಯೋಗಿಕ ಚಾಲನೆಯಾಗಿ ತಿಂಗಳುಗಳು ಕಳೆದರೂ ಶಾಶ್ವತ ವಿದ್ಯುತ್ ಸಂಪರ್ಕದ ಮೂಲಕ ದೀಪಗಳನ್ನು ನಿರಂತರವಾಗಿ ಉರಿಸುವ ವ್ಯವಸ್ಥೆ ಜಾರಿಗೆ ಬಂದಿಲ್ಲ. ಪರಿಣಾಮವಾಗಿ ರಸ್ತೆಯುದ್ದಕ್ಕೂ ದೀಪದ ಕಂಬಗಳು ನಿಂತಿದ್ದರೂ, ರಾತ್ರಿ ವೇಳೆ ಅವುಗಳಿಂದ ಬೆಳಕು ಕಾಣದ ಸ್ಥಿತಿ ಮುಂದುವರಿದಿದೆ.



