ನೀರು ಸರಬರಾಜು ಕಡಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ದ್ವೇಷ ಹೊಂದಿದ್ದವರು ಎನ್ನಲಾದ ಮೂವರು ವ್ಯಕ್ತಿಗಳು ತಲವಾರು ಹಾಗೂ ಕಬ್ಬಿಣದ ರಾಡ್ಗಳಿಂದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಕಬೆಳ್ಳೂರು ಗ್ರಾಮದ ಧನುಪೂಜೆ ನಿವಾಸಿ ಪ್ರಶಾಂತ್ ಬೆಳ್ಚಾಡ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಶಾಂತ್, ರಾಮದಾಸ ಹಾಗೂ ಶಂಕರ ಎಂಬವರ ವಿರುದ್ಧ ಆರೋಪ ಮಾಡಲಾಗಿದೆ. ದೂರುದಾರರು ಬಡಗಬೆಳ್ಳೂರು ಗ್ರಾಮ ಪಂಚಾಯಿತಿಯ ತೆಂಕಬೆಳ್ಳೂರು ವಾರ್ಡ್ನಲ್ಲಿ ಪಂಚಾಯಿತಿ ನೀರು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಕಮ್ಮಾಜೆ-ಧನುಪೂಜೆ ನಾಗಶ್ರೀ ಮಿತ್ರ ಮಂಡಳಿಯವರು ಪಂಚಾಯಿತಿಯ ಅನುಮತಿ ಪಡೆಯದೆ ಒಂದು ಇಂಚಿನ ಪೈಪ್ ಅಳವಡಿಸಿ ನೀರು ಸರಬರಾಜು ಮಾಡುತ್ತಿರುವುದನ್ನು ಪಂಚಾಯಿತಿ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಪಿಡಿಒ ಅವರ ಆದೇಶದಂತೆ ನೀರು ಸರಬರಾಜು ಕಡಿತಗೊಳಿಸಲಾಗಿತ್ತು. ಈ ವಿಚಾರವಾಗಿ ಮಿತ್ರ ಮಂಡಳಿಯ ಅಧ್ಯಕ್ಷ ರಾಮದಾಸ ಅವರು ದೂರುದಾರರ ಮೇಲೆ ದ್ವೇಷ ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ದೂರುದಾರರ ಪರಿಚಯದ ಮೂಡಾಯಿಕೊಡಿ ನಿವಾಸಿ ಪ್ರಶಾಂತ್ ಅವರು ₹5 ಸಾವಿರ ಸಾಲ ಪಡೆದಿದ್ದು, ಹಣವನ್ನು ವಾಪಸ್ ನೀಡದೆ ಸೆಪ್ಟೆಂಬರ್ 7ರಂದು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



