ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿ, ಸುಮಾರು ₹16 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಲ್ತೋಡು ಬೀಟ್ ಅಧಿಕಾರಿಯಿಂದ ಲಭಿಸಿದ ಮಾಹಿತಿಯ ಮೇರೆಗೆ ಬೈಂದೂರು ಠಾಣೆಯ ಪಿಎಸ್ಐ ಸುನಿಲ್ ಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡು ಸೆ.23ರಂದು ಮಧ್ಯಾಹ್ನ 1.15ರ ಸುಮಾರಿಗೆ ದಾಳಿ ನಡೆಸಿದರು.

ದಾಳಿ ವೇಳೆ ಕೆಂಪುಕಲ್ಲು ತುಂಬಿದ್ದ ಎರಡು ಟಿಪ್ಪರ್ಗಳು, ಬ್ಲೇಡ್ ಅಳವಡಿಸಿದ ಎರಡು ಪವರ್ ಟಿಲ್ಲರ್ ಯಂತ್ರಗಳು ಹಾಗೂ ಎರಡು ಕಲ್ಲು ಎತ್ತುವ ಟ್ರಾಲಿ ಯಂತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹16 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ರವೀಂದ್ರ ಪೂಜಾರಿ ಹಾಗೂ ಸತೀಶ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



