ತಾಲೂಕಿನ ತಲಪಾಡಿ ಬಳಿ ಲಾರಿ, ಬಸ್ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಬಸ್ ಹಾಗೂ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಏಕಾಏಕಿ ಪ್ರವೇಶಿಸಿದ ಲಾರಿ ಮಂಗಳೂರು ಕಡೆಗೆ ತಿರುಗುತ್ತಿದ್ದ ವೇಳೆ, ಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಸಂಚರಿಸುತ್ತಿದ್ದ ಬಸ್ಗೆ ಡಿಕ್ಕಿಯಾಗಿದೆ.

ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಾರು ಬಸ್ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆಯ ಕುರಿತು ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.



