ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹವಾಮಾನ ಆಧರಿತ ಬೆಳೆ ವಿಮೆ ಪರಿಹಾರ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಕುರಿತು ರೈತರಲ್ಲಿ ಹಲವು ಅನುಮಾನಗಳು ಮೂಡಿವೆ. ಈ ಬಗ್ಗೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ಬದಲು ವಿಮಾ ವ್ಯವಸ್ಥೆಯ ಪ್ರತಿಯೊಂದು ಹಂತವನ್ನು ಪರಿಶೀಲಿಸಿ ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದ್ದಾರೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪರಿಣಾಮಕಾರಿಯಾಗಿ ಮುಂದುವರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿಮಾ ಸಂಸ್ಥೆಗಳು ಹಾಗೂ ರೈತ ಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. 2023ರ ಬಳಿಕ ವಿಮಾ ಟರ್ಮ್ಶೀಟ್ನ ಮಾನದಂಡಗಳಲ್ಲಿ ಬದಲಾವಣೆಗಳಾಗಿದ್ದರೆ, ಮಳೆ ಪ್ರಮಾಣ ಲೆಕ್ಕಾಚಾರ ಮತ್ತು ಪರಿಹಾರ ನಿಗದಿಯ ವಿಧಾನವನ್ನು ಸರ್ಕಾರ ಹಾಗೂ ವಿಮಾ ಸಂಸ್ಥೆಗಳು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿಮಾ ಕಂತಿನ ಪಾವತಿ, ಟಾಟಾ ಎಐಜಿ ವಿಮಾ ಸಂಸ್ಥೆಯ ಟೆಂಡರ್ ವಿಸ್ತರಣೆ ಹಾಗೂ ಅದರ ಆಡಳಿತಾತ್ಮಕ ಮತ್ತು ಕಾನೂನುಬದ್ಧ ಆಧಾರಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗಿದ್ದರೂ ಅನೇಕ ರೈತರಿಗೆ ನಿರೀಕ್ಷೆಗಿಂತ ಕಡಿಮೆ ಪರಿಹಾರ ದೊರೆತಿದೆ. ಗ್ರಾಮವಾರು ಹವಾಮಾನ ದಾಖಲೆಗಳು, ಹವಾಮಾನ ಮಾಪನ ಯಂತ್ರಗಳ ಕಾರ್ಯನಿರ್ವಹಣೆ ಹಾಗೂ ವಿಮಾ ಲೆಕ್ಕಾಚಾರದಲ್ಲಿ ಬಳಸಲಾದ ದತ್ತಾಂಶವನ್ನು ಪರಿಶೀಲಿಸಬೇಕು ಎಂದು ಪುತ್ತಿಲ ಹೇಳಿದ್ದಾರೆ.
ಗ್ರಾಮವಾರು ಮಳೆ ದಾಖಲೆ, ವಿಮಾ ಘಟಕ, ಟರ್ಮ್ಶೀಟ್ನ ಪ್ರಮುಖ ಮಾನದಂಡಗಳು, ಅರ್ಹ ರೈತರ ಸಂಖ್ಯೆ ಹಾಗೂ ಪಾವತಿಸಿದ ಪರಿಹಾರದ ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ರೈತರ ಅಸಮಾಧಾನವನ್ನು ರಾಜಕೀಯಗೊಳಿಸುವ ಬದಲು ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವೈಜ್ಞಾನಿಕ ನಿಖರತೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.



