ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಕಾಮಗಾರಿಗಳಿಗೆ ವೇಗ ದೊರಕಿದ್ದು, ಮುಂದಿನ 15 ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯದ ಸಹಕಾರದೊಂದಿಗೆ ₹22.59 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಗಾಣದಪಡ್ಪುವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬುಧವಾರ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಶಿಲಾನ್ಯಾಸ ನೆರವೇರಿಸಿದರು.

ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನಾರಾಯಣಗುರು ಮಂದಿರದವರೆಗೆ ಹಲವು ವರ್ಷಗಳಿಂದ ಬಾಕಿಯಾಗಿದ್ದ ಚತುಷ್ಪಥ ರಸ್ತೆಯ ಕಾಮಗಾರಿ ಇದೀಗ ಆರಂಭವಾಗುತ್ತಿದೆ. ಇದೇ ವೇಳೆ ಪುಂಜಾಲಕಟ್ಟೆ ಹೆದ್ದಾರಿ ನಿರ್ವಹಣೆಗೆ ₹34.53 ಕೋಟಿ ಮಂಜೂರಾಗಿದ್ದು, ಈ ಕಾಮಗಾರಿಗೂ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಕ್ಯಾ. ಚೌಟ ತಿಳಿಸಿದರು.
ಹೆದ್ದಾರಿ ಕಾಮಗಾರಿಗಳಿಗೆ ಸಹಕಾರ ನೀಡಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.



