ಕರ್ತವ್ಯನಿರತ ಟಿಟಿಇಯ ಸಮಯಪ್ರಜ್ಞೆ ಹಾಗೂ ಎಚ್ಚರಿಕೆಯಿಂದ ರೈಲು ಪ್ರಯಾಣಿಕರೊಬ್ಬರ ಕಾಣೆಯಾಗಿದ್ದ ಲ್ಯಾಪ್ಟಾಪ್ ಬ್ಯಾಗ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್ಗೆ ರೈಲು ಸಂಖ್ಯೆ 16585ರಲ್ಲಿ ಪ್ರಯಾಣಿಸುತ್ತಿದ್ದ ಅಭಿಷೇಕ್ ಎಂಬುವರ ಲ್ಯಾಪ್ಟಾಪ್ ಬ್ಯಾಗ್ ಬರ್ತ್ನಿಂದ ಕಾಣೆಯಾಗಿತ್ತು. ಈ ಕುರಿತು ರೈಲ್ಮದದ್ ಮೂಲಕ ದೂರು ಸ್ವೀಕರಿಸಿದ ಬಳಿಕ ರೈಲ್ವೆ ರಕ್ಷಣಾ ಪಡೆ ವಿಚಾರಣೆ ನಡೆಸಿತು.

ಬ್ಯಾಗ್ನಲ್ಲಿ ಸುಮಾರು ₹80 ಸಾವಿರ ಮೌಲ್ಯದ ಲೆನೊವೊ ಲ್ಯಾಪ್ಟಾಪ್, ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳು ಇದ್ದವು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಹೊಳೆನರಸೀಪುರ–ಸಕಲೇಶಪುರ ನಡುವಿನ ಯಾವುದೋ ಪ್ರದೇಶದಲ್ಲಿ ಬ್ಯಾಗ್ ಕಾಣೆಯಾಗಿರಬಹುದು ಎಂದು ಪ್ರಯಾಣಿಕರು ಶಂಕಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ರೈಲ್ವೆ ಸಿಬ್ಬಂದಿ ಹಾಗೂ ಟಿಟಿಇಯ ಸಮಯೋಚಿತ ಕ್ರಮದಿಂದ ಕಳವಾಗಿದ್ದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.



