ದಸರಾ ರಜೆ ನೀಡದೆ ಪದವಿ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿರುವುದನ್ನು ವಿರೋಧಿಸಿ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿರುವ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆಡಳಿತದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳೂರು ದಸರಾ ಸಂಭ್ರಮದ ಸಂದರ್ಭದಲ್ಲಿ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ದಸರಾ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪರೀಕ್ಷೆಯಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.
ಪರೀಕ್ಷೆ ಮುಂದೂಡುವಂತೆ ಮನವಿ ಸಲ್ಲಿಸಿದರೂ ಕಾಲೇಜು ಆಡಳಿತ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕೂಡ ಪ್ರತಿಭಟನೆಗೆ ಬೆಂಬಲ ನೀಡಿದೆ. ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೂ ದೂರು ಸಲ್ಲಿಸಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ.
ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ.



