ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಉಭಯ ದೇಶಗಳು ಪರಸ್ಪರರ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಷಿಯಲ್’ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ಇಂಧನ ಕದನ ವಿರಾಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಉಭಯ ದೇಶಗಳು ಒಪ್ಪಂದವನ್ನು ಉಲ್ಲಂಘಿಸಬಾರದು ಎಂದು ಎಚ್ಚರಿಸಿದ್ದಾರೆ.
ರಷ್ಯಾದ ಡೀಸೆಲ್ ಸಂಸ್ಕರಣಾಗಾರದ ಮೇಲಿನ ಉಕ್ರೇನ್ ದಾಳಿಯಿಂದ ಜಾಗತಿಕ ಇಂಧನ ಕೊರತೆ ಉಂಟಾಗುತ್ತಿದೆ ಎಂದು ಆರೋಪಿಸಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟ್ರಂಪ್ ಟೀಕಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.
ಆದರೆ, ಕದನ ವಿರಾಮದ ವ್ಯಾಪ್ತಿ, ಅನುಷ್ಠಾನದ ವಿಧಾನ ಹಾಗೂ ಒಪ್ಪಂದವನ್ನು ಉಭಯ ದೇಶಗಳು ಹೇಗೆ ಪಾಲಿಸಲಿವೆ ಎಂಬ ಬಗ್ಗೆ ಶ್ವೇತಭವನದಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಝೆಲೆನ್ಸ್ಕಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದೂ ಟ್ರಂಪ್ ಈ ಹಿಂದೆ ಆರೋಪಿಸಿದ್ದರು.
ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ನಿಲ್ಲಿಸುವ ಕುರಿತು ಟ್ರಂಪ್ ನೀಡಿರುವ ಘೋಷಣೆ ರಷ್ಯಾ–ಉಕ್ರೇನ್ ಯುದ್ಧದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದೆ.



