ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ಶಾಂತಮ್ಮ ಅವರನ್ನು ನಂಬಿಸಿ ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ ಆರೋಪದ ಮೇಲೆ ವೆಂಕಟೇಶ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ವಂಚನೆ ಬಳಿಕ ಅಪಘಾತದ ನಾಟಕವಾಡಿ, ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸಿದ್ಧಪಡಿಸಿದ ವಿಡಿಯೋ ಕಳುಹಿಸಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ.

ಅನಾರೋಗ್ಯದ ಸಮಸ್ಯೆಯಿಂದ ಆಗಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದ ಶಾಂತಮ್ಮ ಅವರಿಗೆ ಈ ವೇಳೆ ವೆಂಕಟೇಶ್ ಪರಿಚಯವಾಗಿದ್ದ. ಜ್ಯೋತಿಷ್ಯ ಹೇಳುತ್ತಿದ್ದ ಆತನ ಮಾತುಗಳನ್ನು ನಂಬಿದ್ದ ಶಾಂತಮ್ಮ, ಬಳಿಕ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಸಲಹೆ ಪಡೆಯಲು ಆತನನ್ನು ಸಂಪರ್ಕಿಸಿದ್ದರು.
ನಂತರ ಶಾಂತಮ್ಮ ಅವರ ಮನೆಗೆ ಬಂದಿದ್ದ ವೆಂಕಟೇಶ್, ನಿಂಬೆಹಣ್ಣು ನೀಡಿ ಚೌಡೇಶ್ವರಿ ಪೂಜೆ ಮಾಡಬೇಕು. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ ಎನ್ನಲಾಗಿದೆ. ಇದೇ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಮನೆಗೆ ಬರುತ್ತಿದ್ದ ಆತ, ಒಡವೆಗಳನ್ನು ಪಡೆದುಕೊಂಡು ಹೋಗುತ್ತಿದ್ದ. ಹೀಗೆ ಸುಮಾರು ಒಂದು ವರ್ಷದಲ್ಲಿ 300 ಗ್ರಾಂ ಚಿನ್ನಾಭರಣಗಳನ್ನು ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 19ರಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ಒಡವೆಗಳನ್ನು ವಾಪಸ್ ಕೇಳಿದಾಗ, ತನಗೆ ಅಪಘಾತವಾಗಿದ್ದು ಬದುಕುಳಿಯುವ ಸಾಧ್ಯತೆ ಕಡಿಮೆ ಎಂಬಂತೆ ಬಿಂಬಿಸುವ ಎಐ ವಿಡಿಯೋವನ್ನು ಕಳುಹಿಸಿದ್ದ ಎನ್ನಲಾಗಿದೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ವಿಡಿಯೋ ಪರಿಶೀಲಿಸಿದಾಗ ಅದು ಕೃತಕವಾಗಿ ಸಿದ್ಧಪಡಿಸಿರುವುದು ಗೊತ್ತಾಗಿದ್ದು, ಶಾಂತಮ್ಮ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಬ್ಯಾಟರಾಯನಪುರ ಪೊಲೀಸರು ಆರೋಪಿ ವೆಂಕಟೇಶ್ನನ್ನು ಬಂಧಿಸಿ, ವಂಚನೆಗೆ ಸಂಬಂಧಿಸಿದಂತೆ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.



