ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದು, ₹2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾ ಸೇರಿದಂತೆ ನಗದು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ವಿನಯನಗರ ನಿವಾಸಿ ಆರೀಫ್ ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ಅಕೀಫ್ ಎಂದು ಗುರುತಿಸಲಾಗಿದೆ.

ಅಕ್ಟೋಬರ್ 27ರಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಧ್ಯಾಹ್ನ 12.05ರ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ ಮಾರಾಟದ ಉದ್ದೇಶದಿಂದ ಇಟ್ಟುಕೊಂಡಿದ್ದ ಗಾಂಜಾ ಪತ್ತೆಯಾಗಿದೆ.

ಆರೋಪಿಗಳಿಂದ 5.710 ಕೆ.ಜಿ. ಗಾಂಜಾ, ₹225 ನಗದು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಇಬ್ಬರೂ ಈ ಹಿಂದೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಕಾಪು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



