ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಅವರ ಶಿಷ್ಯವೃಂದದ ಮಯೂರ ಪ್ರತಿಷ್ಠಾನ, ಮಂಗಳೂರು ಇದರ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ‘ಮಯೂರ ಯಾನ-2’ ಕಾರ್ಯಕ್ರಮ ನ.14ರಂದು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದ ತಂತ್ರಿಗಳಾದ ವೇ.ಮೂ. ಕೃಷ್ಣರಾಜ ತಂತ್ರಿ ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರಾವಳಿಯ ಗಂಡುಕಲೆ ಯಕ್ಷಗಾನವು ಪುರಾಣ ಜ್ಞಾನವನ್ನು ಜನರಿಗೆ ತಲುಪಿಸುವ ಮಹತ್ವದ ಮಾಧ್ಯಮವಾಗಿದೆ. ಆರಾಧನಾ ಕೇಂದ್ರಗಳಲ್ಲಿ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರುವುದು ಸಂತಸದ ವಿಚಾರ. ಈ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದಲೂ ಯಕ್ಷಗಾನ ಕಲೆಗೆ ಸರ್ವ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಯುವ ಕಲಾವಿದರನ್ನು ಗುರುತಿಸಿ ಉತ್ತೇಜಿಸುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಯೂರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಪಿ. ಸದಾಶಿವ ಐತಾಳ್ ಮಾತನಾಡಿ, ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಹಾಗೂ ಯುವ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಪೋಷಕರ ಸಹಕಾರದೊಂದಿಗೆ ಮಯೂರ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಖಂಡ ರವೀಂದ್ರ ನಾಯಕ್ ಕೆ., ವಿ ಇನ್‌ಫಾ ಕನ್‌ಸ್ಟ್ರಕ್ಷನ್ಸ್ ಮತ್ತು ಬಿಲ್ಡರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಲಯನ್ ರಮಾನಂದ ನೂಜಿಪ್ಪಾಡಿ, ಶ್ರೀ ಅನಂತಪದ್ಮನಾಭ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮೊಕ್ತೇಸರ ಭಾಸ್ಕರ್ ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಯೂರ ಪ್ರತಿಷ್ಠಾನದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಮಯೂರ ಯಾನ-2’ ಕಾರ್ಯಕ್ರಮವು ಯಕ್ಷಗಾನ ಕಲೆಯ ಪ್ರೋತ್ಸಾಹ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಆಶಯವನ್ನು ಸಾರಿತು.



