ಪಾಣೆಮಂಗಳೂರು ನೇತ್ರಾವತಿ ನದಿಯ ಹಳೆಯ ಸೇತುವೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಕೆಳಕ್ಕೆ ಬಿದ್ದಿದ್ದ ಕಬ್ಬಿಣದ ಕಮಾನನ್ನು ಬಂಟ್ವಾಳ ಪುರಸಭೆ ಮರುಜೋಡಣೆ ಮಾಡಿದೆ. ಈ ಮೂಲಕ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಕ್ಕೆ ಸದ್ಯ ಪರಿಹಾರ ದೊರೆತಿದೆ.

ಭಾರೀ ಗಾತ್ರ ಮತ್ತು ತೂಕ ಹೊಂದಿರುವ ಕಮಾನನ್ನು ಮರುಜೋಡಿಸಲು ಆರಂಭದಲ್ಲಿ ಬುಲ್ಡೋಜರ್ ಸಹಾಯದಿಂದ ಪ್ರಯತ್ನಿಸಲಾಗಿತ್ತು. ಆದರೆ, ಈ ಪ್ರಯತ್ನ ಫಲ ನೀಡಿರಲಿಲ್ಲ. ಕಾಮಗಾರಿ ಹಿನ್ನೆಲೆಯಲ್ಲಿ ಸೇತುವೆಯಲ್ಲಿ ವಾಹನ ದಟ್ಟಣೆಯೂ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಬಳಿಕ ಕ್ರೇನ್ ಸಹಾಯದಿಂದ ಕಮಾನನ್ನು ಮರುಸ್ಥಾಪಿಸುವ ಕಾರ್ಯ ಕೈಗೊಳ್ಳಲಾಯಿತು. ಪುರಸಭೆಯ ನಿಕಟಪೂರ್ವ ಸದಸ್ಯ ಇದ್ರೀಸ್ ಪಿ.ಜೆ. ಸೇರಿದಂತೆ ಸ್ಥಳೀಯರ ಸಹಕಾರದೊಂದಿಗೆ ಕಮಾನು ಮರುಜೋಡಣೆ ಕಾರ್ಯ ಪೂರ್ಣಗೊಳಿಸಲಾಯಿತು.

ನೇತ್ರಾವತಿ ನದಿಯ ಹಳೆಯ ಸೇತುವೆಯಲ್ಲಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸೇತುವೆಯ ಎರಡೂ ಬದಿಗಳಲ್ಲಿ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಕಬ್ಬಿಣದ ಕಮಾನುಗಳನ್ನು ಅಳವಡಿಸಲಾಗಿತ್ತು.
ಆರಂಭದಲ್ಲಿ ಅಳವಡಿಸಲಾಗಿದ್ದ ಕಮಾನು ದುರ್ಬಲವಾಗಿದ್ದ ಕಾರಣ, ಪದೇಪದೇ ವಾಹನಗಳು ಡಿಕ್ಕಿ ಹೊಡೆದು ಅದು ನೆಲಕ್ಕುರುಳುತ್ತಿತ್ತು. ಇದರಿಂದ ಎಚ್ಚೆತ್ತ ಸ್ಥಳೀಯಾಡಳಿತ ಬಳಿಕ ಬಲಿಷ್ಠ ಕಬ್ಬಿಣದ ಕಮಾನನ್ನು ಅಳವಡಿಸಿತ್ತು. ಇದೀಗ ಬಿದ್ದಿದ್ದ ಕಮಾನನ್ನೂ ಮರುಜೋಡಣೆ ಮಾಡಿರುವುದರಿಂದ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿರ್ಬಂಧವನ್ನು ಸೂಚಿಸುವ ವ್ಯವಸ್ಥೆ ಮತ್ತೆ ಕಾರ್ಯಾರಂಭಿಸಿದೆ.



