
ಹೈದರಬಾದ್ : ಮೃತಪಟ್ಟ ಮೇಲೆ ದೇಹವನ್ನು ವ್ಯರ್ಥವಾಗಿ ಮಣ್ಣು ಮಾಡುವುದಕ್ಕಿಂತ ಅಂಗಾಂಗ ದಾನ ಮಾಡಿದರೆ ಇನ್ನೊಂದು ಜೀವವಾದರೂ ಬದುಕುಳಿಯುವಂತೆ ಮಾಡಬಹುದು. ಅಂಥದ್ದೇ ದಿಟ್ಟ ನಿರ್ಧಾರ ಕೈಗೊಂಡಿದೆ 14 ತಿಂಗಳ ಪುಟ್ಟ ಕೂಸಿನ ಕುಟುಂಬ. ಮೆದುಳು ನಿಷ್ಕ್ರಿಯಗೊಂಡಿದ್ದ ಮಗುವಿನ ಮೂತ್ರಪಿಂಡವನ್ನು 58 ವರ್ಷದ ಮಹಿಳೆಗೆ ದಾನ ಮಾಡಲಾಗಿದೆ. ಹೈದರಾಬಾದ್ನ ಕಿಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ.ಕಳೆದ 7 ವರ್ಷಗಳಿಂದ ಮಹಿಳೆ ಮೂತ್ರಪಿಂಡ ಸಮಸ್ಯೆಯಿಂದಾಗಿ ಡಯಾಲಿಸಿಸ್‌ಗೆ ಒಳಗಾಗಿದ್ದರು. ಇದೇ ವೇಳೆ 14 ತಿಂಗಳ ಕೂಸಿನ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರು ಮಗು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಅಂಗಾಂಗ ದಾನಕ್ಕೆ ಮುಂದಾದರು. ಅದರಂತೆ ಮೂತ್ರಪಿಂಡವನ್ನು ಅಗತ್ಯವಿರುವ ಮಹಿಳೆಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಅಲ್ಲಿನ ವೈದ್ಯರು ನಡೆಸಿದ್ದಾರೆ. ಚಿಕ್ಕ ಮಕ್ಕಳ ಅಂಗಗಳು ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ ವಯಸ್ಸಾದ ಜನರಲ್ಲಿ ಅಳವಡಿಸುವಲ್ಲಿ ಹಲವು ತೊಡಕುಗಳು ಉಂಟಾಗುತ್ತವೆ. ಇದೆಲ್ಲವನ್ನೂ ಮೀರಿ ನುರಿತ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳ ನೆರವಿನಿಂದ ಈ ಸಾಧನೆ ಮಾಡಿದ್ದಾರೆ.



