ಕಲ್ಲನ್ನು ಕೆತ್ತಿ ಮೂರ್ತಿ ಮಾಡುವುದು ಶಿಲ್ಪಿ..ಆದರೇ ಆ ಶಿಲ್ಪಿಯೊಳಗೆ ನೀನು ಶಿಲ್ಪಿಯಾಗು,ಅದರ ಪ್ರಕ್ರಿಯೆ ಹೇಳಿಕೊಟ್ಟ ವ್ಯಕ್ತಿಯೂ ಸಮಾಜಕ್ಕೆ ಬೇಕಾಗಿಲ್ಲ.. ಅವರಿಗೆ ಶಿಲ್ಪಿ ಹಾಗೂ ಕೆತ್ತಿದ ಮೂರ್ತಿ ಸಾಕು..ಇದರಂತೆಯೇ ಶಿಕ್ಷಕರು.. ಶಿಕ್ಷಕರು ಎಂದರೆ ಮೇಣದ ರೀತಿ.. ಅವರು ಉರಿಯುತ್ತ ಇನ್ನೊಬ್ಬರಿಗೆ ಬೆಳಕು ನೀಡುತ್ತಾರೆ.. ಕೊನೆಗೊಮ್ಮೆ ಮೇಣ ಸಂಪೂರ್ಣ ಬತ್ತಿ ಹೋಗುತ್ತೆ.. ಆ ಬೆಳಕಿನಿಂದ ಸಾಧಿಸಿದವರು ಸಮಾಜದ ಮುನ್ನೆಲೆಗೆ ಬರುತ್ತಾರೆ.. ತನ್ನನ್ನೇ ಉರಿಸಿ ಬೆಳಕು ನೀಡಿದ ಆ ಗುರುವೆಂಬ ವ್ಯಕ್ತಿ ಜೀವನ ಸಾರ್ಥಕಗೊಳಿಸಿ ಕಣ್ಮರೆಯಾಗಿರುತ್ತಾರೆ.
ಈ ಬರಹದ ಮೂಲಕ ನಾನು ತಿಳಿಯಪಡಿಸಲು ಹೊರಟಿರುವುದು ಮೇರು ವ್ಯಕ್ತಿತ್ವದ ಒಡೆಯರಾದ ಶಿಕ್ಷಕರಾಗಿರುವ ನೂರಾರು ವಿದ್ಯಾರ್ಥಿಗಳಿಗೆ ಗುರುವಿನ ನೈಜ ಅರ್ಥ ತಿಳಿಸಿ ಬದುಕಿನ ಪಾಠ ಕಲಿಸಿದ ನನ್ನ ನೆಚ್ಚಿನ ಗುರು ಉಷಾ ಎಂ. ಎಲ್ ರವರ ಕುರಿತು.. ನನ್ನ ಅನುಭವದ ಹಾಗೂ ಸಹಪಾಠಿ ಮಿತ್ರರ ಅಭಿಪ್ರಾಯ ಸಂಗ್ರಹಿಸಿ ಅಕ್ಷರಕ್ಕಿಳಿಸಿದ ಬರಹವಿದು.ಬರಹದ ಉದ್ದೇಶ ಅಭಿಮತ ಎಂಬ ದಿಟ್ಟ ಸಂಸ್ಥೆಯ ಗುರು ನಮನ ಸ್ಪರ್ಧೆಯಲ್ಲಿ ನನ್ನ ಮೆಚ್ಚಿನ ಗುರುವಿನ ಕುರಿತು ತಿಳಿಸುವುದು ಜೊತೆಗೆ ಇಂತಹ ಅಭಿಮಾನದ ಶಿಕ್ಷಕರು ಸರ್ವರಿಗೂ ಸ್ಫೂರ್ತಿಯಾಗಬೇಕು,ವಿದ್ಯಾರ್ಥಿ ಗಳಿಗೆ, ಶಿಕ್ಷಕರಿಗೆ,ಭಾವಿ ಶಿಕ್ಷಕರಾಗುವವರಿಗೆ ಒಂದಿಷ್ಟು ಪ್ರೇರಣೆಯಾಗಲಿ ಎಂಬುದಾಗಿದೆ.ಉಷಾ ಎಂ. ಎಲ್. ಕಡಬ ತಾಲೂಕಿನ ಕುಂತೂರ್ ನಲ್ಲಿರುವ ಹಚ್ಚ ಹಸುರಿನ ಅರಣ್ಯ ಪ್ರದೇಶಗಳ ಮದ್ಯೆ ಸುಂದರವಾಗಿ ತಲೆ ಎತ್ತಿ ನಿಂತಿರುವ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು.. ಇವರ ಕುರಿತು ಬರೆಯಲು ಒಂದೆರಡು ಬಾರಿ ಆಲೋಚಿಸಬೇಕು.. ಯಾವ ಗುಣವನ್ನು ಆಯ್ದು ಬರೆಯಬೇಕೆಂದು.. ಏಕೆಂದರೆ ಬಿ.ಎಡ್ ಎಂಬುದು ವೃತ್ತಿಪರ ಶಿಕ್ಷಣ..ಒಂದರ್ಥದಲ್ಲಿ ಹೇಳುವುದಾದರೆ ಬೋಧನೆ, ಮರು ಬೋಧನೆ,ಚುಟುವಟಿಕೆ, ಕಾರ್ಯಕ್ರಮ ಎಲ್ಲವೂ ಮಿಶ್ರಿತವಾಗಿ ಒಂದಿಷ್ಟು ಒತ್ತಡದ ಮದ್ಯೆ ಸಾಗುವ ಪ್ರಕ್ರಿಯೆ.ಇಲ್ಲಿ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ದಾಟಿದವರು. ವಿವಿಧ ರೀತಿಯಲ್ಲಿ ಪ್ರೌಢತೆಯ ಚಿಂತನ ಲಹರಿ ಅವರಲ್ಲಿ ಇರುತ್ತೆ..ಶೈಕ್ಷಣಿಕ ಪಯಣದಲ್ಲಿ ಎಲ್ಲ ರೀತಿಯ ಶಿಕ್ಷಕರನ್ನು ಕಂಡು ಬಂದಿರುತ್ತಾರೆ.ಈ ವಿದ್ಯಾರ್ಥಿಗಳ ಅಥವಾ ಪ್ರಶಿಕ್ಷಣಾರ್ಥಿಗಳ ಮನಸ್ಸುಗಳಲ್ಲಿ ನೆಚ್ಚಿನ ಗುರು ಎಂದು ಪಟ್ಟ ಪಡೆಯುವುದು ಸುಲಭವಲ್ಲ..ಆದರೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೆಚ್ಚಿನ ಗುರುವೆಂದರೆ ಬಹುಪಾಲು ನೆನಪಾಗುವುದು ಉಷಾ ಮೇಡಂ..ಈ ಬರಹ ಬರೆಯುದಕ್ಕಿಂತ ಮುಂಚೆ ಹಲವು ವಿದ್ಯಾರ್ಥಿಗಳ ಬಳಿ ಹೋಗಿ ಕೇಳಿದ್ದೆ..ಎಲ್ಲರ ಉತ್ತರವು ಇದುವೇ.ಯಾವುದೇ ಆಲೋಚನೆಗೆ ಸಮಯ ತೆಗೆದುಕೊಳ್ಳದೆ ಕ್ಷಣದಲ್ಲಿಯೇ ಮುಖದಲ್ಲಿ ಹೊಸ ಆವೇಶ ವ್ಯಕ್ತಪಡಿಸುತ್ತ ಹೇಳುತ್ತಾರೆ ನನಿಗಿಷ್ಟ ಉಷಾ ಮೇಡಂ ಎಂದು.ಕಳೆದ ಬ್ಯಾಚ್ ಗಳಲ್ಲೂ ಕೇಳಿದರೂ ಇದೆ ಉತ್ತರವನ್ನು ನುಡಿಯುತ್ತಾರೆ..ಉತ್ತರ ಕರ್ನಾಟಕದ ಭಾಗದಿಂದ ಈ ಕರಾವಳಿ ಮಣ್ಣಿಗೆ ಕಲಿಕೆಗಾಗಿ ಆಗಮಿಸಿದ ವಿದ್ಯಾರ್ಥಿಗಳಲ್ಲೂ ಕೇಳಿದಾಗ ಅದೆಲ್ಲ ಕೇಳ್ಬೇಕಾ ಬ್ರೋ..ಉಷಾ ಮೇಡಂ ಅವ್ರೆ…ಸ್ಯಾನೆ ಚಂದವಾಗಿ ಪಾಠ ಮಾಡ್ತಾರೇ..ಸುಖಾಸುಮ್ಮನೆ ಈ ಹಿರಿಮೆ ಅವರಿಗೆ ವಿದ್ಯಾರ್ಥಿಗಳು ನೀಡಿದ್ದಲ್ಲ..ಒಂದನೇ ಕ್ಲಾಸ್ ನ ವಿದ್ಯಾರ್ಥಿಯೂ ಕೂಡ ಮೈ ಫೆವರೇಟ್ ಟೀಚರ್ ಅಂತ ಎಲ್ಲ ಶಿಕ್ಷಕರನ್ನು ಹೇಳಲ್ಲ. ಆ ಪುಟ್ಟ ಹೃದಯದಲ್ಲೂ ಸ್ಥಾನ ಪಡೆಯಬೇಕಾದರೆ ಶಿಕ್ಷಕರು ಹೇಗೋ ಅವರಿಗೆ ಇಷ್ಟ ಆಗಿರಬೇಕು.. ಇನ್ನು ಬಿ. ಎಡ್ ಪ್ರಶಿಕ್ಷಣಾರ್ಥಿಗಳ ಮನಸ್ಸು ಗೆಲ್ಲುವುದಾದರೆ ಅವರ ನಡೆ ನುಡಿ ಹೇಗಿರಬಹುದು? ನೀವೊಮ್ಮೆ ಆಲೋಚಿಸಿ.. ಪ್ರಾಂಶುಪಾಲರ ಕೊಠಡಿ ಹೇಗಿರುತ್ತೆ ಎಂದು.. ತೀವ್ರ ಮೌನ.. ಒಂದಿಷ್ಟು ಫೈಲು.. ಅಲ್ಲಿ ಕೂತಿರುವ ವ್ಯಕ್ತಿಗೆ ಮುಗುಳು ನಗೆ ರಹಿತ ಸದಾಗಾಂಭೀರ್ಯತೆಯ ಮುಖಭಾವ.. ವಿದ್ಯಾರ್ಥಿಗಳು ಒಮ್ಮೆ ಒಳಗೆ ಹೋಗಲು ಸಾವಿರ ಸಲ ಆಲೋಚಿಸುವ ಪ್ರಕ್ರಿಯೆ.. ಹೋದರು ಕೂಡ ಒಬ್ಬ ವ್ಯಕ್ತಿ ಹೋಗಬಹುದು.. ಗುಂಪಾಗಿ ಹೋದರೆ ಮತ್ತೆ ಒಂದಿಷ್ಟು ಪ್ರಶ್ನೆ.. ನಮ್ಮನ್ನೇ ಗೊಂದಲಗೊಳಿಸುವ ನಿರಾಸದಾಯಕ ಪದಪುಂಜಗಳು ಅವರ ಬಾಯಲ್ಲಿ ಬರುತ್ತೆ.. ಎಲ್ಲ ಕಾಲೇಜುಗಳಲ್ಲೂ ಹೀಗೆ ಎಂದು ಅಲ್ಲ.. ಆದರೆ ಬಹುತೇಕ ಕಾಲೇಜುಗಳಲ್ಲಿ ಇದೆ ಪರಿಸ್ಥಿತಿ.. ಇದಕ್ಕೆಲ್ಲ ತದ್ವಿರುದ್ದ ಉಷಾ ಮೇಡಂ..ಪ್ರಾಂಶುಪಾಲರ ಘನತೆ ಕಾಪಾಡುತ್ತ ವಿದ್ಯಾರ್ಥಿಯ ಹೃದಯ ಮುಟ್ಟಿದ್ದಾರೆ.. ಮೇಡಂಗೆ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಬೋಧನೆ ನಡೆಸಿದ ಅನುಭವವಿದೆ.. ಎಲ್ಲ ರೀತಿಯ ವಿದ್ಯಾರ್ಥಿಗಳ ಮನಸ್ಥಿತಿ ನೋಟದಲ್ಲೇ ಅರಿವಷ್ಟು ನುರಿತರಾಗಿದ್ದಾರೆ. ಬಿ. ಎಡ್ ಪ್ರಶಿಕ್ಷಣಾರ್ಥಿಗಳು ಮುಂದೆ ಶಿಕ್ಷಕರಾಗಿ ಹೊರಹೊಮ್ಮುವವರು.. ಕೇವಲ ಪಠ್ಯ ಹಾಗೂ ಚುಟುವಟಿಕೆಯಿಂದ ಪರಿಪೂರ್ಣ ಶಿಕ್ಷಕರಾಗಲು ಸಾಧ್ಯವಿಲ್ಲ.ಆ ಎರಡು ವರ್ಷದ ಪಯಣದಲ್ಲಿ ಓರ್ವ ಉತ್ತಮ ಶಿಕ್ಷಕ ಹೇಗಿರಬೇಕೆಂದು ಕಲಿಕಾ ಕೇಂದ್ರ ತಿಳಿಸಬೇಕು..ಅಲ್ಲಿರುವ ಬೋಧಕ ವರ್ಗ ಮಾದರಿಯಾಗಿರಬೇಕು.. ಇವೆಲ್ಲದರಲ್ಲೂ ಪರಿಣತರಾಗಿದ್ದಾರೆ ಉಷಾಮೇಡಂ. ವಿದ್ಯಾರ್ಥಿಗಳ ಮುಂದೆ ಪ್ರಾಂಶುಪಾಲರಾಗಿ,ಬೋಧಕರಾಗಿ, ಆಪ್ತ ಸ್ನೇಹಿತರಾಗಿ,ಸಲಹೆಗಾರರಾಗಿ, ಮಾರ್ಗದರ್ಶಿಯಾಗಿ ಮೇಡಂ ಸದಾ ವಿದ್ಯಾರ್ಥಿಗಳ ಜೊತೆ ಬೆರೆಯುತ್ತಾರೆ.. ನನ್ನ ಶೈಕ್ಷಣಿಕ ಪಯಣದಲ್ಲಿ ಒಂದಿಬ್ಬರು ಮಾದರಿ ಶಿಕ್ಷಕರು ಇದ್ದರು.. ಅದಕ್ಕೆ ಇವರ ಹೆಸರು ಸೇರಿ ಬಿಟ್ಟಿತು.ಸದಾ ಹಸನ್ಮುಖಿಯಾಗಿ ತರಗತಿಯನ್ನು ಕೂಡ ವಿಭಿನ್ನ ಶೈಲಿಯಲ್ಲಿ ನಡೆಸುತ್ತಾರೆ..ತರಗತಿ ಒಂದು ಚರ್ಚಾಕೂಟದಂತೆ ನಡೆಸುವುದು ಇವರ ಶೈಲಿ..ಒಂದು ವಿಷಯ ಪ್ರಾರಂಭಿಸಿ ಓರ್ವ ವಿದ್ಯಾರ್ಥಿ ಏನಾದರು ಹೇಳಿದರೆ ಮತ್ತೆ ಅದರ ಜಾಡು ಹಿಡಿದು ಇನ್ನಿತರ ವಿಷಯಗಳು ಬರುತ್ತದೆ.. ಅನಾದಿ ಕಾಲದಿಂದ ನಿನ್ನೆ ನಡೆದ ಘಟನೆಗಳು ಕೂಡ ತರಗತಿಗೆ ಲಗ್ಗೆ ಇಡುತ್ತದೆ. ಯಾರನ್ನು ಕೂಡ ಮೇಡಂ ತರಗತಿಯಲ್ಲಿ ಮೌನ ವೃತದಲ್ಲಿ ಇರಲು ಬಿಡುವುದಿಲ್ಲ.ಸದಾ ಸಕ್ರಿಯವಾಗಿರಬೇಕು. ಆದ್ದರಿಂದ ಅವರ ಬೋಧನೆ ಶೈಲಿ ಕೇಳುವುದೇ ಒಂದು ಆವೇಶ.ವಿದ್ಯಾರ್ಥಿಗಳು ಸಂಪೂರ್ಣ ವಿಷಯ ಕರಗತ ಮಾಡುತ್ತಾರೆ. ಒಟ್ಟಾರೆ ಹೇಳುದಾದರೆ ಇಂದಿನ ಶಿಕ್ಷಣ ಕ್ರಮಕ್ಕೆ ಬೇಕಾಗಿರುವ “ಸುಗಮಕಾರ” ಎಂಬ ಕಲ್ಪನೆ ಇವರು ಅನುಸರಿಸಿ ವಿದ್ಯಾರ್ಥಿಗಳಿಗೆ ಮುಕ್ತತೆಯ ವಾತಾವರಣ ನೀಡುತ್ತಾರೆ.ಮೇಡಂರವರ ಅರ್ಹತೆಗೆ ತಕ್ಕಂತೆ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎಡ್ ವಿಭಾಗದ ಬಿ.ಒ.ಇ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಬಿ. ಎಡ್ ಕಾಲೇಜುಗಳಲ್ಲಿ ನನ್ನ ಸ್ನೇಹ ಬಳಗದವರು ಇದ್ದಾರೆ. ಅಲ್ಲಿಗೆ ಮೇಡಂ ಭೇಟಿ ನೀಡಿದ್ದಾಗ ಅವರೆಲ್ಲ ಮೇಡಂರವರ ಮಾತಿಗೆ ಮನಸೋತು ನನ್ನಲ್ಲಿ ಹೇಳಿದ್ದು ಇದೆ.. ಇವೆಲ್ಲಕ್ಕಿಂತ ಮುಖ್ಯ ಮೇಡಂ ರವರ ಈ ಒಂದು ಗುಣ ಎಲ್ಲರಿಗೂ ಇಷ್ಟ.. “ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು” ಸಾಸಿವೆ ಕಾಳಿನಷ್ಟು ಯಾರಲ್ಲಾದರೂ ಪ್ರತಿಭೆ ಇದ್ದದ್ದು ಮೇಡಂಗೆ ಗೊತ್ತಾದರೆ ಸಾಕು.. ಮತ್ತೆ ಮೇಡಂ ಅವರಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಎಲ್ಲರ ಮುಂದೆ ಅದನ್ನು ಹೇಳಿ ಅಭಿನಂದನೆ ಸಲ್ಲಿಸಿ ಮೇಡಂ ನಮ್ಮ ನಗುವಿನಲ್ಲಿ ಅವರ ಸಂತೋಷ ಕಾಣುತ್ತಾರೆ.. ವೇದಿಕೆಯನ್ನು ಒದಗಿಸಿಕೊಡುತ್ತಾರೆ.ಓರ್ವ ವಿದ್ಯಾರ್ಥಿ ಗುರುಗಳಿಂದ ನಿರೀಕ್ಷಿಸುದಕ್ಕಿಂತ ನೂರು ಪಟ್ಟು ಹೆಚ್ಚಾಗಿ ಇವರು ನೀಡುತ್ತಾರೆ.. ಇವೆಲ್ಲ ಮೇಡಂರನ್ನು ವಿದ್ಯಾರ್ಥಿಗಳು ಉತ್ತುಂಗದಲ್ಲಿ ಇರಿಸಲು ಕಾರಣವಾಗಿವೆ.ಮೇಡಂ ಪಿ.ಎಚ್.ಡಿ ನಿರತರಾಗುತ್ತಿದ್ದಾರೆ,ಇದರ ನಡುವೆ ಕಾಲೇಜು ಹೊರತು ಪಡಿಸಿ ಹಲವು ಸಂಘ ಸಂಸ್ಥೆ, ಧಾರ್ಮಿಕ ಸಮಿತಿಗಳಲ್ಲೂ ಹೊಣೆಗಾರಿಕೆ ವಹಿಸಿ ಹೆಚ್ಚಿನ ಒತ್ತಡದ ಮದ್ಯೆ ವಿದ್ಯಾರ್ಥಿಗಳ ಸ್ಟೇಟಸ್ ಒಮ್ಮೊಮ್ಮೆ ನೋಡುವುದಿದೆ..ನೋಡಿದ ಸ್ಟೇಟಸ್ ನಲ್ಲಿ ಏನಾದರು ನಮ್ಮ ಪ್ರತಿಭೆ, ಸ್ವರಚಿತ ಬರಹ, ಇನ್ನಿತರ ಸಕಾರಾತ್ಮಕ ಅಂಶಗಳು ಇದ್ದರೆ ಅವರು ಅಭಿನಂದನೆ, ಪ್ರೋತ್ಸಾಹದ ಮಾತು ಹಾಕದೆ ಇರುವುದಿಲ್ಲ.ಆ ಪ್ರೇರಣೆಯ ಸಂದೇಶ ನೋಡಿದ ವಿದ್ಯಾರ್ಥಿಗೆ ಇದಕ್ಕಿಂತ ದೊಡ್ಡ ಪ್ರೋತ್ಸಾಹ ಮತ್ತೇನು ಸಿಗಲಾರವು..ತರಗತಿಯಲ್ಲೂ ಹೇಳಿ ಎಲ್ಲರಿಗೂ ತಿಳಿಸುತ್ತಾರೆ. ಇದೆಲ್ಲ ಕೇಳಿದ ವಿದ್ಯಾರ್ಥಿ ಎಂದಿಗೂ ತನ್ನ ಆ ಹವ್ಯಾಸ ಕೈ ಬಿಡಲಾರ.ಮೊನ್ನೆ ಸ್ಥಳೀಯ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿದ್ದಾಗ ಅಲ್ಲೊಬ್ಬರು ಅವರ ಪ್ರಾಂಶುಪಾಲರ ಕುರಿತು ಏನೋ ಒಂದು ವಿಷಯದಲ್ಲಿ ವಿಷಾದ ವ್ಯಕ್ತಪಡಿಸಿ ಪ್ರಾಂಶುಪಾಲರು ಎಲ್ಲರೂ ಹೀಗೆಯೇ ಅಂದಾಗ ನಾನು ನಮ್ಮ ಕಾಲೇಜಿನ ಉಷಾ ಮೇಡಂ ಕುರಿತು ಹೀಗೆ ವಿವರಿಸುತ್ತಾ ಹೇಳಿದೆ.. ಅವರು ಹೌಹಾರಿದರು.. ಈಗಿನ ಶಿಕ್ಷಣ ಕ್ರಮದಲ್ಲೂ ಇಂತವರು ಇದ್ದಾರ..? ಎಂದು ಕೇಳಿದರು..ಅಲ್ಲೇ ನಿಜಕ್ಕೂ “ಗ್ರೇಟ್” ಎಂಬ ಬಿರುದನ್ನು ನೀಡಿಯೇ ಬಿಟ್ಟರು.ಇತ್ತೀಚಿನ ಸನ್ನಿವೇಶದಲ್ಲಿ ಗುರು ಶಿಷ್ಯ ಬಂಧ ಯಾಂತ್ರಿಕವಾಗುತ್ತ ಶಾಲಾ ಕಾಲೇಜುಗಳಲ್ಲಿ ಇದ್ದಾಗ ಮಾತ್ರ ಅವರು ಶಿಕ್ಷಕರು ಹೊರ ಬಂದರೆ ಅವರು ಯಾರೋ ಎನ್ನುವ ಸ್ಥಿತಿಗೆ ಶಿಕ್ಷಣ ಪದ್ಧತಿ ತಲುಪಿದೆ.. ಶಿಕ್ಷಕ ವಿದ್ಯಾರ್ಥಿಗಳ ನಡುವೆ ಅಂತರ ಸ್ಥಾಪಿಸಿ ಗುರು ಶಿಷ್ಯ ಎಂಬುದು ಕೇವಲ ನೆಪಮಾತ್ರದ ಸಂಬಂಧ ಎಂದು ಭಾವಿಸುವ ನೂತನ ತಲೆಮಾರುಗಳ ಮದ್ಯೆ ನನಗೆ ಉಷಾ ಮೇಡಂ ವಿಭಿನ್ನವಾಗಿ ಕಾಣುತ್ತಾರೆ..ಪ್ರಾಂಶುಪಾಲರಿಗೆ ತನ್ನ ವ್ಯಾಪ್ತಿ ಮೀರದೆಯೂ ಕೆಲಸ ಮಾಡಬಹುದು..ಆ ಕೆಲಸ ಆ ವ್ಯಕ್ತಿಯ ಹೊಣೆಗಾರಿಕೆಯಷ್ಟೇ..ಅದರೆಲ್ಲೆನು ವಿಶೇಷತೆಯಿಲ್ಲ..ಪ್ರಾಂಶುಪಾಲರ ಕಾರ್ಯ ನಿರ್ವಹಿಸುತ್ತ ಜೊತೆಯಲ್ಲೇ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಯಾಗಿ ಬೆರೆಯುವುದು ಅದು ನುರಿತರಿಂದ ಮಾತ್ರ ಸಾಧ್ಯ.ಶಿಕ್ಷಕರಾಗಬೇಕಾದವರಿಗೆ ಇರಬೇಕಾದ್ದದ್ದು ಕೂಡ ಅದುವೇ..ಬೀಳ್ಕೊಡುಗೆ ಮೆರವಣಿಗೆಗೆ ತಂದ ರಥದಲ್ಲಿನ ಕುದುರೆ ಕಟ್ಟಿಹಾಕಿ ಕುದುರೆ ಯಾಕೆ ನಮ್ಮ ಗುರುಗಳು ಕೂತಿರುವ ರಥವನ್ನು ನಾವೇ ಎಳೆಯುತ್ತೇವೆ ಎಂದ ವಿದ್ಯಾರ್ಥಿಗಳ ಗುರು,ಜಗತ್ತು ಕಂಡ ಶ್ರೇಷ್ಠ ಗುರು ರಾಧಕೃಷ್ಣರಿಗೆ ಆ ಸ್ಥಾನ ಬರಲು ಅವರೇನು ಮ್ಯಾಜಿಕ್ ಮಾಡಲಿಲ್ಲ..ಗುರುವಿನ ನೈಜ ಸ್ವರೂಪ ವಿದ್ಯಾರ್ಥಿಗಳಿಗೆ ತೋರಿಸಿದರು ಅಷ್ಟೇ.. ಉಳಿದೆಲ್ಲವೂ ವಿದ್ಯಾರ್ಥಿಗಳೇ ಅವರಿಗೆ ನೀಡಿದ್ದು.. ಗುರುವಾಗುವುದು ಸುಲಭ.. ವಿದ್ಯಾರ್ಥಿ ಮೆಚ್ಚಿದ ಗುರುವಾಗಬೇಕಾದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸ್ಥಾನ ಪಡೆಯಬೇಕು.. ಅದು ಸುಲಭವಲ್ಲ.. ಒಂದೆರಡು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಆತನ ಗುರುವಿನ ಸ್ಥಾನ ಉಳಿದರೆ ಅದೇ ದೊಡ್ಡ ಸಾಧನೆ.. ಹಾಗಾದರೆ ಇಡೀ ಸಂಸ್ಥೆಯ ವಿದ್ಯಾರ್ಥಿಗಳ ಬಾಯಲ್ಲಿ ಉಷಾ ಮೇಡಂ ಎಂದು ಹೇಳುವಾಗ ನಾನು ಇನ್ನೇನು ಬರೆಯಲು ಸಾಧ್ಯ.. ಲೇಖನಿ ಕೂಡ ಸೋತು ಹೋಗಿದೆ..ಓರ್ವ ಗುರುವಿಗೆ ಇದಕ್ಕಿಂತ ದೊಡ್ಡ ಭಾಗ್ಯ ಏನಿದೆ.. ವೃತ್ತಿ ಬದುಕು ಸಾರ್ಥಕತೆಗೆ ಇಂತಹ ಅಭಿಮಾನದ ಮಾತುಗಳೇ ಸಾಕು..ಆ ವ್ಯಕ್ತಿತ್ವಕ್ಕೆ ಅವರೇ ಸಾಟಿ.. ಮತ್ತಷ್ಟು ಇವರು ಉತ್ತುಂಗಕ್ಕೇರಲಿ.. ಉತ್ಸಾಹದ ಚಿಲುಮೆಯಾಗುತ್ತ ಸದಾ ಆ ನಗುಮುಖ ನಮಗೆ ಪ್ರೇರಣೆಯಾಗಲಿ ಎಂದಷ್ಟೇ ಹೇಳಬಲ್ಲೆ…
ಝುನೈಫ್
ದ್ವಿತೀಯ ಬಿ.ಎಡ್
ಮಾರ್ ಇವನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆ ಕುಂತೂರ್
ಕಡಬ ತಾಲೂಕು ದಕ್ಷಿಣ ಕನ್ನಡ
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…