ಶ್ರೀ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ರವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಬಹು ನಿರೀಕ್ಷಿತ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಇದೇ 2025ರ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ. ಜನವರಿ 18ರ ಸಂಜೆ ಜಿಲ್ಲೆಯ ಹಲವು ಗಣ್ಯ ಅತಿಥಿಗಳಿಂದ ಸೀಸನ್-3ಗೆ ಅಧಿಕೃತ ಚಾಲನೆ ದೊರೆಯಲಿದ್ದು ಕರಾವಳಿ ಉತ್ಸವ ಮೈದಾನದಿಂದ ನಾರಾಯಣ ಗುರು ವೃತ್ತ, ಮಣ್ಣಗುಡ್ಡ ಗುರ್ಜಿ ವೃತ್ತ, ಕೆನರಾ ಉರ್ವ” ದವರೆಗೆ ಪ್ರತಿ ನಿತ್ಯ ಸಂಜೆ 4ರಿಂದ ರಾತ್ರಿ 10 ರವರೆಗೆ ಈ “ಆಹಾರೋತ್ಸವ” ನಡೆಯಲಿದೆ.
ಈ ಹಿಂದೆ ಜನವರಿ 15 ರಿಂದ 19 ರ ವರೆಗೆ ನಿಗದಿಯಾಗಿದ್ದ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಅಲ್ಪ ಬದಲಾವಣೆಯಾಗಿದ್ದು ಜನವರಿ 17ರ ಸಂಜೆ ಮಂಗಳೂರು ನಗರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭದ್ರತೆ ಹಾಗೂ ಇನ್ನಿತರ ಕಾರಣಗಳಿಗೆ ಜಿಲ್ಲಾಡಳಿತದ ಮನವಿಯ ಮೇರೆಗೆ ಸ್ಟ್ರೀಟ್ ಫುಡ್ ಫಿಯೆಸ್ಟದ ದಿನಾಂಕದಲ್ಲಿ ಬದಲಾವಣೆ ಮಾಡಲು ಕಾರ್ಯಕ್ರಮದ ಆಯೋಜಕರು ತೀರ್ಮಾನಿಸಿದ್ದಾರೆ.
ಸ್ಟ್ರೀಟ್ ಫುಡ್ ಫಿಯೆಸ್ಟಾಗೆ ಎಲ್ಲಾ ತಯಾರಿಗಳು ಭರದಿಂದ ಸಾಗಿದ್ದು ಈಗಾಗಲೇ ಆನ್ ಲೈನ್ ಮೂಲಕ ನೂರಕ್ಕೂ ಅಧಿಕ ಸಂಖ್ಯೆಯ ಆಹಾರ ಮಳಿಗೆಗಳು ನೋಂದಾಯಿಕೊಂಡಿದ್ದು, ಕೆಲವೇ ಕೆಲವು ಮಳಿಗೆಗಳು ಮಾತ್ರ ಬಾಕಿ ಉಳಿದಿವೆ. ಆಸಕ್ತರು ಕೂಡಲೇ ಆನ್ ಲೈನ್ ಮೂಲಕವೇ ನೋಂದಾಯಿಸಿಕೊಳ್ಳುವಂತೆ ಮನವಿ.
ಕಳೆದ ಎರಡು ಆವೃತ್ತಿಗಳ ಮಂಗಳೂರಿನ ಸ್ಟ್ರೀಟ್ ಫುಡ್ ಫಿಯೆಸ್ಟ ಲಕ್ಷಾಂತರ ಜನರನ್ನು ಆಕರ್ಷಿಸಿ ಭಾರೀ ಜನಮನ್ನಣೆ ಪಡೆದು ಅತ್ಯಂತ ಯಶಸ್ವಿಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಸೀಸನ್-3 ಗೆ ಕ್ಷಣಗಣನೆ ಆರಂಭವಾಗಿದ್ದು ಸಾರ್ವಜನಿಕ ವಲಯದಲ್ಲಿ ಅತ್ಯುತ್ತಮ ಸ್ಪಂದನೆ ಹಾಗೂ ನಿರೀಕ್ಷೆ ಗರಿಗೆದರಿದೆ. ಈ ಹಿಂದಿನಂತೆಯೇ ಗ್ರಾಹಕರಿಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಶೈಲಿ ಮಾತ್ರವಲ್ಲದೇ, ವಿಶಿಷ್ಟವಾದ ಕರಾವಳಿ ಖಾದ್ಯ, ಉತ್ತರ ಕರ್ನಾಟಕ, ಗುಜರಾತಿ, ಆಂಧ್ರ, ಪಂಜಾಬಿ ಸೇರಿದಂತೆ ದಕ್ಷಿಣ ಭಾರತೀಯ, ಉತ್ತರ ಭಾರತೀಯ, ಸಸ್ಯಾಹಾರಿ, ಮಾಂಸಾಹಾರಿ, ಹೀಗೆ ಬಹು ಬೇಡಿಕೆಯ ವಿವಿಧ ಶೈಲಿಯ ಸಾಂಪ್ರದಾಯಿಕ ಆಹಾರ ಮಳಿಗೆಗಳು ಇರಲಿವೆ. ಅದರಲ್ಲೂ ಈ ಬಾರಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ಸಸ್ಯಾಹಾರಿ ಮತ್ತು ಮಾಂಸಹಾರಿಗಳಿಗೆ ಪ್ರತ್ಯೇಕ ಕೌಂಟರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇನ್ನುಳಿದಂತೆ ಈ ಹಿಂದೆ ಇದ್ದಂತಹ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳು ಈ ಬಾರಿಯೂ ಸಹ ಇರಲಿದ್ದು ಮಕ್ಕಳ ಆಟದ ಜೋನ್ ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದ್ದು, ಐದೂ ದಿನಗಳಲ್ಲಿ ಏಕಕಾಲಕ್ಕೆ ಹಲವು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾನ್ವಿತರಿಗಾಗಿ “ನಮ್ಮ ವೇದಿಕೆ- ನಿಮ್ಮ ಪ್ರತಿಭೆ”, ಸೆಲ್ಫಿ ಕೌಂಟರ್, ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಅವಕಾಶ, ಹೀಗೆ ಹತ್ತು ಹಲವು ಮನರಂಜನಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಸಾರ್ವಜನಿಕರ ಸುರಕ್ಷತೆಗೆ ವಿಶೇಷ ಆದ್ಯತೆಯ ಜೊತೆಗೆ ಆಹಾರೋತ್ಸವ ನಡೆಯುವಲ್ಲಿ ಸ್ವಚ್ಛತೆಯ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತಿರಲು ಈ ಬಾರಿಯೂ ಕ್ರಮಬದ್ಧವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು ನಿಗದಿತ ಸ್ಥಳಗಳಲ್ಲದೇ, ರಸ್ತೆಯ ಬದಿಯಲ್ಲಿ ಎಲ್ಲಿಯೂ ವಾಹನ ಪಾರ್ಕಿಂಗ್ ಮಾಡದೇ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮನವಿ.
ಒಟ್ಟಾರೆಯಾಗಿ ಈ ಐದು ದಿನಗಳ ಸಂಭ್ರಮದ ವಾತಾವರಣದಲ್ಲಿ ಮಿಂದೇಳಲು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನವು ಸರ್ವರಿಗೂ ಆದರದ ಪ್ರೀತಿಯ ಸ್ವಾಗತವನ್ನು ಕೋರುತ್ತಿದೆ. ಪತ್ರಿಕಾಗೋಷ್ಟಿಯಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಶ್ರೀ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ಶ್ರೀ ದಿವಾಕರ್ ಪಾಂಡೇಶ್ವರ್, ಪ್ರತಿಷ್ಠಾನದ ಪ್ರಮುಖರಾದ ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ ಮೊದಲಾದವರು ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…