ಮಳೆ ಶುರುವಾಯಿತೆಂದರೆ ಕರಾವಳಿಯಲ್ಲಿ ಜಲಪಾತಗಳು ಮೈದೋರುತ್ತವೆ. ಇವು ದೂರದಿಂದ ನೋಡಲು ರೋಚಕ ಮತ್ತು ಸುಂದರ. ದ.ಕ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಜಲಪಾತಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬಂದವರು ಜಲಪಾತದೆದುರು ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಮುಂದಾಗಿ ಅಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ಮೂಡಬಿದ್ರೆ ಸಮೀಪದ ಎರುಗುಂಡಿ ಜಲಪಾತದ ಸಮೀಪ ನಡೆದಿದೆ. ಸ್ಥಳೀಯರು ಹಗ್ಗ ಬಳಸಿ ಜಲಪಾತದ ನಡುವೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. 
ಮೂಡುಬಿದ್ರಿ ಪಾಲಡ್ಕ ಎರುಗುಂಡಿ ಫಾಲ್ಸ್ ಮಳೆಗಾಲದಲ್ಲಿ ಅಬ್ಬರಿಸುವ ಜಲಪಾತ. ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಪಾತವನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಕಾಡಿನ ನಡುವೆ ಇರುವುದರಿಂದ ಜಲಪಾತದವರೆಗೆ ರಸ್ತೆ ಇಲ್ಲ. ನಡೆದುಕೊಂಡು ಸಾಗಬೇಕು. ಇದರಿಂದಾಗಿ ಇಲ್ಲಿ ಪೊಲೀಸರ ನಿಗಾ ಕಡಿಮೆ. ಬರುವ ಪ್ರವಾಸಿಗರು ಮೋಜಿನಾಟದಲ್ಲಿ ಬಂಡೆಗಳ ಮೇಲೆ ಸರ್ಕಸ್ ಮಾಡಲು ತೊಡಗುತ್ತಾರೆ. ಮಳೆ ಬಂದರೆ ಜಲಪಾತಕ್ಕೆ ಹರಿದು ಬರುವ ನೀರಿನ ಪ್ರಮಾಣ ಏಕಾಏಕಿ ಏರುತ್ತದೆ. ಮೋಜಿನಾಟದಲ್ಲಿ ತೊಡಗಿದ್ದವರು ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ನಡೆದಾಗ ಸ್ಥಳೀಯರು ಹಗ್ಗ ಕಟ್ಟಿ ಜಲಪಾತದ ನಡುವೆ ಸಿಲುಕಿದವರನ್ನು ರಕ್ಷಿಸಿದ್ದಾರೆ. ಅಪಾಯ ಲೆಕ್ಕಿಸದೆ ಜಲಪಾತದಲ್ಲಿ ನೀರಾಟವಾಡಲು ಹೋಗಿದ್ದ ಪ್ರವಾಸಿಗರು ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಈ ಹಿಂದೆ ನಡೆದಿವೆ. ಈ ಬಾರಿ ಪ್ರವಾಸಿ ತಂಡದವರ ಅದೃಷ್ಟ ನೆಟ್ಟಗಿತ್ತು. ಸ್ಥಳೀಯರ ಸಕಾಲಿಕ ನೆರವಿನಿಂದ ಬದುಕಿ ಬಂದಿದ್ದಾರೆ.



