ಇಡೀ ಋತುವಿನಲ್ಲಿ ನಿರಂತರವಾಗಿ ಮೀನುಗಾರಿಕೆ ನಡೆಸಲಾಗದೇ ಬೋಟುಗಳು ಮೀನುಗಾರಿಕೆಯನ್ನು ಮೊಟಕುಗೊಳಿಸಿ ಲಂಗರು ಹಾಕಲಾರಂಭಿಸಿವೆ. ವಾರದಿಂದ ಸುರಿದ ಮಳೆಯಂತೂ ಮೀನುಗಾರರ ಕೊನೆಯ ಹಂತದ ಆದಾಯವನ್ನೂ ಕಸಿದುಕೊಂಡಿದೆ. ಪ್ರತೀ ವರ್ಷ ಜೂನ್ ಒಂದರಿ0ದ ಎರಡು ತಿಂಗಳು ಮೀನುಗಾರಿಕೆಗೆ ರಜೆ ಇರುತ್ತದೆ. ಈ ಅವಧಿಯಲ್ಲಿ ಆಳಸಮುದ್ರ ಬೋಟ್‌ಗಳಿಗೆ ನಿಷೇಧವಿದೆ.
ಆದರೆ ಈ ವರ್ಷ ಮೇ ತಿಂಗಳಲ್ಲೇ ಹವಾಮಾನ ವೈಪರೀತ್ಯದಿಂದ ಮೀನುಗಾರಿಕೆ ನಡೆಸಲು ಆಗಿಲಿಲ್ಲ. ಜೊತೆಗೆ ಮತ್ಸ್ಯ ಕ್ಷಾಮವೂ ಸೇರಿ ಮೀನುಗಾರರಿಗೆ ಸಾಕಷ್ಟು ನಷ್ಟ ಉಂಟಾಗಿದೆ. ಹೀಗಾಗಿ ಮೀನುಗಾರರು ಬೇಸರದಿಂದಲೇ ಈ ಋತುವಿನ ಮೀನುಗಾರಿಕೆ ಕೊನೆಗೊಳಿಸಿದ್ದಾರೆ. ಉತ್ತಮ ಮೀನುಗಾರಿಕೆಯ ನಿರೀಕ್ಷೆಯಿಂದ 2024ರ ಆಗಸ್ಟ್ನಲ್ಲಿ ಮೀನುಗಾರಿಕೆಗೆ ಕಡಲಿಗಿಳಿದಿದ್ದ ಮೀನುಗಾರರಿಗೆ ವರ್ಷ ಪೂರ್ತಿ ನಿರೀಕ್ಷಿಸಿದಷ್ಟು ಮೀನು ಸಿಕ್ಕಿರಲಿಲ್ಲ. ನಷ್ಟಕ್ಕೊಳಗಾದ ಹಲವು ಬೋಟ್ ಮಾಲಕರು ಮೀನುಗಾರಿಕೆ ಮುಂದುವರಿಸಲಾಗದೇ 4 ತಿಂಗಳ ಹಿಂದೆಯೇ ಬೋಟ್‌ಗಳನ್ನು ಬಂದರಿನಲ್ಲಿ ಲಂಗರು ಹಾಕಿದ್ದರು. 
ಜನವರಿಯಲ್ಲಿ ಶೇ. 40ರಷ್ಟು ಬೋಟ್‌ಗಳು ಲಂಗರು ಹಾಕಿದ್ದರೆ, ಈಗ ಆ ಸಂಖ್ಯೆ ಶೇ. 80 ಕ್ಕೆ ತಲುಪಿದೆ. ಪ್ರಸ್ತುತ ಶೇ.15-20ರಷ್ಟು ಬೋಟುಗಳು ಮಾತ್ರ ಮೀನುಗಾರಿಕೆಯಲ್ಲಿ ನಿರತವಾಗಿವೆ. ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಒಟ್ಟಾರೆ ಬೋಟ್ ಮತ್ತು ಮೀನು ಹಿಡಿಯುವ ಬಲೆಗಳಿಗೆ ಕೋಟಿಗೂ ಅಧಿಕ ಬಂಡವಾಳ ಹಾಕಿದ್ದ ಬೋಟ್ ಮಾಲೀಕರಿಗೆ ಈ ವರ್ಷ ನಷ್ಟವೇ ಆಗಿದೆ.



