ಸುಮಾರು 62 ವರ್ಷಗಳ ಹಿಂದೆ ಮುಂಬಾಯಿ ನಗರಕ್ಕೆ ಕೆಲಸವನ್ನು ಹುಡುಕಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬರು ಇದೀಗ ಊರಿನತ್ತ ಹಿಂತಿರುಗಿದ ಆಶ್ಚರ್ಯಕರ ಘಟನೆಯೊಂದು ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ರಾಯಶ ನಿವಾಸಿ ದಿ. ಗುಡ್ಡಪ್ಪ ಪೂಜಾರಿ ಹಾಗೂ ನಾಗಮ್ಮ ಅವರ ಮೂರನೇ ಪುತ್ರ ಸಂಜೀವ ಪೂಜಾರಿ ಅವರು ತನ್ನ 13 ನೇ ಇಸವಿಯಲ್ಲಿ ಮನೆ ಬಿಟ್ಟು ಕೆಲಸಕ್ಕಾಗಿ ಮುಂಬಯಿ ನಗರಕ್ಕೆ ಕಾಲಿಟ್ಟರು. ಅದಾದ ಬಳಿಕ ಇಂದಿನವರೆಗೆ ಮನೆ ಮಂದಿಯವರ ಮುಖವನ್ನು ಒಮ್ಮೆಯೂ ತಿರುಗಿ ನೋಡಿದವರಲ್ಲ.

ತಂದೆ ತಾಯಿಯ ಸುಖದುಖದಲ್ಲಾಗಲಿ,ಅಣ್ಣ ತಮ್ಮಂದಿರ ಗೌಜಿಗಮ್ಮತ್ತುಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿರಲಿಲ್ಲ.ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಸಂಪರ್ಕ ಮನೆಯವರ ಜೊತೆ ಸಿಗಲಿಲ್ಲವಂತೆ. ಅಷ್ಟಕ್ಕೂ ಅವರನ್ನು ಸ್ಥಳೀಯ ತನಿಯಪ್ಪ ಎಂಬವರು ಉದ್ಯೋಗ ನೀಡುವುದಾಗಿ ಮುಂಬಯಿಗೆ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ. ತಂದೆ ತಾಯಿಗೆ ಮಗನ ಬರುವಿಕೆ ಕಾದು ಕಾದು ಕೊನೆಯುಸಿರೆಳೆದರು. ಮಗ ಬದುಕಿ ಬರುವ ಆಸೆಯನ್ನು ತಂದೆತಾಯಿಯ ಜೊತೆ ಮನೆಯವರು ಕಳೆದುಕೊಂಡಿದ್ದರು. ಇದೀಗ ಅವರ ತಮ್ಮ ಗಂಗಾಧರ ಪೂಜಾರಿ ಅವರ ಮನೆಗೆ ಬಂದಿದ್ದಾರೆ.62 ವರ್ಷಗಳ ಬಳಿಕ ಊರಿಗೆ ಬಂದ ಅಣ್ಣನನ್ನು ಕಂಡು ತಮ್ಮನಿಗೆ ಬಹಳ ಸಂತೋಷವಾಗಿದೆ ಮಲೆಯಾಳ, ಮರಾಠಿ, ಬಂಗಾಳಿ, ಹಿ0ದಿ, ತುಳು ಹಾಗೂ ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ. ಯಾವುದೇ ದಾಖಲೆ ಪತ್ರಗಳು ಅವರಲ್ಲಿ ಇಲ್ಲ ಎಂದು ಹೇಳುತ್ತಾರೆ ಎಂದು ಮನೆಯವರು ತಿಳಿಸುತ್ತಾರೆ.



