ಶಾಲೆಗಳು ವಿದ್ಯಾರ್ಥಿ ಸ್ನೇಹಿಯಾಗಿರಬೇಕು, ಮಕ್ಕಳು ಸಂಭ್ರಮದಿಂದ ಕಲಿಕೆಯಲ್ಲಿ ತೊಡಗಬೇಕೆನ್ನುವ ಮಹತ್ವಕಾಂಕ್ಷೆ ಎಲ್ಲರಲ್ಲೂ ಇದೆ. ಬೇಸಿಗೆ ರಜೆಯ ಮಜಾವನ್ನು ಕಳೆದು ಸಪ್ಪೆ ಮೋರೆಯಲ್ಲಿ ಶಾಲೆ ಕಡೆ ಹೆಜ್ಜೆ ಹಾಕುವ ಮಕ್ಕಳು ಶಾಲೆಯಲ್ಲಿ ಮತ್ತೆ ನಿತ್ಯದ ಪಾಠ ನೋಟ್ಸ್ಗಳಲ್ಲಿ ಒಗ್ಗಿಕೊಳ್ಳಲು ಸ್ವಲ್ಪ ದಿನಗಳಾದರು ಬೇಕೆನ್ನುವುದು ಸಾಮಾನ್ಯ ಸಂಗತಿ. ಮಕ್ಕಳು ಸಂತಸದ ಕಲಿಕೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಮತ್ತು ಇಷ್ಟಪಟ್ಟು ಓದಿಕೊಳ್ಳುವಂತಾಗಬೇಕೆನ್ನುವ ಉದ್ದೇಶದಿಂದ ಮಂಚಿ – ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಮಳೆ ಹಬ್ಬ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಶಾಲಾ ಹಿರಿಯ ವಿದ್ಯಾರ್ಥಿ ಶ್ರೀಮತಿ ವೀಣಾ ಸರಸ್ವತಿ ಮಾತನಾಡಿ, “ನಮ್ಮ ಜೀವನದ ವ್ಯವಸ್ಥೆಯಲ್ಲಿ ಬಾಲ್ಯದ ಶಾಲಾ ಜೀವನವೆನ್ನುವುದು ಅಮೂಲ್ಯವಾದದು. ಭವಿಷ್ಯವನ್ನು ನಿರ್ಮಾಣ ಮಾಡುವ ಈ ಹಂತದಲ್ಲಿ ಸಂಸ್ಕಾರ ಭರಿತ ಶಿಕ್ಷಣ ಮತ್ತು ಶಿಕ್ಷಕರ ಹಾಗೂ ಹಿರಿಯರ ಮೌಲ್ಯ ತುಂಬಿದ ಹಿತ ನುಡಿಗಳು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಮಳೆ ಹಬ್ಬದಂತಹ ಪಠ್ಯಪೂರಕ ಶಿಬಿರಗಳು ವಿದ್ಯಾರ್ಥಿಗಳ ಕಲಿಕಾ ಚೈತನ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಸಂಶಯವಿಲ್ಲ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ ರಾವ್ ಮಾತನಾಡಿ, “ಶಾಲೆಯ ವಿಶೇಷ ಕಾರ್ಯಕ್ರಮವಾದ ಮಳೆ ಹಬ್ಬವು ವಿದ್ಯಾರ್ಥಿಗಳಲ್ಲಿ ಸಂತಸ ಮತ್ತು ಸಂಭ್ರಮವನ್ನು ಕಟ್ಟಿಕೊಡುವುದರ ಜೊತೆಗೆ ಕಲಿಕೆಯಲ್ಲಿ ತೊಡಗಿಕೊಳ್ಳುವ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದೆ.” ಎಂದರು.
ಒಟ್ಟು ಮೂರು ದಿನಗಳ ಕಾಲ ನಡೆದ ಮಳೆಹಬ್ಬದಲ್ಲಿ ಅಂದಾಜು 300 ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿದರು. ವಿವಿಧ ರೀತಿಯ ಜಾಗೃತಿ ಹಾಡುಗಳು, ಚಪ್ಪಾಳೆಗಳ ವೈವಿಧ್ಯತೆಗಳೊಂದಿಗೆ ಸಂಪನ್ಮೂಲ ವ್ಯಕ್ತಿಯಾದ ಮಕ್ಕಳ ರಂಗಭೂಮಿ ಕಲಾವಿದ ಕೃಷ್ಣಪ್ಪ ಬಂಬಿಲ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತರು.ಕತ್ತಲೆ ಹಾಡು ಖ್ಯಾತಿಯ ನಾದ ಮಣಿನಾಲ್ಕೂರು ವಿದ್ಯಾರ್ಥಿಗಳಲ್ಲಿ ಸಾಧನೆ ಮತ್ತು ಸಾಧ್ಯತೆಗಳ ಕುರಿತಾಗಿ ಅರಿವಿನ ಪಯಣದ ಬುತ್ತಿಯನ್ನು ಹಂಚಿದರು. ವಿವಿಧ ರೀತಿಯ ಹಾಡುಗಳು ಹಾಗೂ ಪ್ರಸಕ್ತ ಬದುಕಿನ ಸುಂದರ ಘಟನೆಗಳನ್ನು ಹೆಣೆಯುತ್ತಾ ವಿದ್ಯಾರ್ಥಿಗಳಿಗೆ ಅರಿವಿನ ಬೆಳಕನ್ನು ಚೆಲ್ಲಿದರು.
ಪರಿಸರ ತ್ಯಾಜ್ಯ ಮತ್ತು ಅದರ ನಿರ್ವಹಣೆ ಕುರಿತಾಗಿ ಹಸಿರು ದಳದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಬಜಾಲ್ ಸುಂದರವಾದ ಮಾಹಿತಿಯನ್ನು ಒದಗಿಸಿದರು. ಮನೆಯೊಳಗಿನ ಕಸವನ್ನು ವಿಲೇವಾರಿ ಮಾಡುವ ಬಗೆ ಮತ್ತು ಪರಿಸರದ ಜೊತೆಗಿನ ನಮ್ಮ ನಿಲುವನ್ನು ಬಲಪಡಿಸಬೇಕೆನ್ನುವ ಮಾತುಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಪ್ರಕೃತಿಯ ಉಳಿವಿನಲ್ಲಿ ನಮ್ಮ ಪಾತ್ರದ ಅಗತ್ಯತೆಯನ್ನು ಪ್ರತಿಬಿಂಬಿಸುವ ನೀರು – ಬೇರು ವಿಷಯದ ಕುರಿತಂತೆ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ರಮೇಶ್ ಬಾಯಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ತುಂಬಿದ ಮಾತುಗಳನ್ನಾಡಿದರು. ಸಣ್ಣ ಸಣ್ಣ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅದರ ಮಹತ್ವದ ಅರಿವನ್ನು ಮೂಡಿಸಿದರು. ಇದೇ ಸಂದರ್ಭದಲ್ಲಿ ಸಭಾ ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕರಾದ ರಮೇಶ್ ರಾವ್ ನೂಜಿಪ್ಪಾಡಿ, ಹಿರಿಯ ವಿದ್ಯಾರ್ಥಿ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಮತಿ ದೇವಕಿ ಎಚ್, ನಿವೃತ್ತ ಶಿಕ್ಷಕಿಯಾದ ಶ್ರೀಮತಿ ಅನುಸೂಯ ರಾವ್, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಶಾಂತ ಎಸ್ ಸ್ವಾಗತಿಸಿದರು. ಕಲಾ ಶಿಕ್ಷಕ ಶ್ರೀ ಜಗನ್ನಾಥ್ ವಂದಿಸಿದರು ಚಿತ್ರಕಲಾವಿದ ತಾರಾನಾಥ ಕೈರಂಗಳ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…
ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಪುಟ್ಟ ಮಕ್ಕಳು ಸಹಿತ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ…
ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿನ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ…
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…