ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಮನೆ ಮನೆಗಳಿಂದ ಸಂಗ್ರಹವಾಗುವ ಘನ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ರಸ್ತೆ ಬದಿ ಹಾಗೂ ನದಿ ತೀರದಲ್ಲಿ ರಾಶಿ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಂಚಿನಡ್ಕದಲ್ಲಿರುವ ಡಂಪಿಂಗ್ ಯಾರ್ಡ್ಗೆ ಸಾಗಿಸಬೇಕಾದ ತ್ಯಾಜ್ಯವನ್ನು ನೇತ್ರಾವತಿ ಸೇತುವೆ ಕೆಳಭಾಗದ ಕಂಚಿಕಾರ್ ಪೇಟೆ ರಸ್ತೆ ಸಮೀಪ ರಾಶಿ ಹಾಕಲಾಗಿದ್ದು, ಕೊಳೆತ ತ್ಯಾಜ್ಯದಿಂದ ದುರ್ವಾಸನೆ ವ್ಯಾಪಿಸಿದೆ. ಮಳೆಗಾಲದಲ್ಲಿ ಈ ತ್ಯಾಜ್ಯದಿಂದ ಹೊರಬರುವ ಕೊಳಕು ನೀರು ನೇರವಾಗಿ ನೇತ್ರಾವತಿ ನದಿಗೆ ಸೇರುತ್ತಿದ್ದು, ಪರಿಸರ ಮಾಲಿನ್ಯದ ಜೊತೆಗೆ ಸಾರ್ವಜನಿಕ ಆರೋಗ್ಯಕ್ಕೂ ಗಂಭೀರ ಅಪಾಯ ಉಂಟುಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೇತ್ರಾವತಿ ನದಿಯ ನೀರನ್ನೇ ಶುದ್ಧೀಕರಿಸಿ ಮಂಗಳೂರು ಮಹಾನಗರ ಸೇರಿದಂತೆ ಸಾವಿರಾರು ಜನರಿಗೆ ಕುಡಿಯುವ ನೀರಾಗಿ ಪೂರೈಕೆ ಮಾಡಲಾಗುತ್ತದೆ. ಇಂತಹ ಮಹತ್ವದ ನದಿಗೆ ತ್ಯಾಜ್ಯ ಮಿಶ್ರಿತ ನೀರು ಸೇರುತ್ತಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಂಟ್ವಾಳ ಪುರಸಭೆಯ ಮನೆ ಮನೆಯ ಕಸ ಸಂಗ್ರಹ ಸೇವೆಯೂ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಸ ಸಂಗ್ರಹಕ್ಕೆ ಬಳಸುವ ಸುಮಾರು ಹತ್ತು ವಾಹನಗಳ ಪೈಕಿ ಏಳು ವಾಹನಗಳು ದುರಸ್ತಿಯಲ್ಲಿದ್ದು, ಕೇವಲ ಮೂರು ವಾಹನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ಇದರಿಂದ ಹಲವಾರು ವಾರ್ಡ್ಗಳಲ್ಲಿ ದಿನಗಳ ಕಾಲ ಕಸ ಸಂಗ್ರಹವಾಗದೆ ರಸ್ತೆ ಬದಿಯಲ್ಲೇ ರಾಶಿಯಾಗುತ್ತಿದ್ದು, ದುರ್ವಾಸನೆ ಹಾಗೂ ಸೊಳ್ಳೆ-ನೊಣಗಳ ಕಾಟ ಹೆಚ್ಚಾಗಿದೆ. ಮಳೆಗಾಲದಲ್ಲಿ ಕೊಳೆತ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಪರಿಸ್ಥಿತಿ ಹದಗೆಡುತ್ತಿದ್ದರೂ ಪುರಸಭೆ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಕುರಿತು ಸಾಮಾಜಿಕ ಹೋರಾಟಗಾರ ಗೋವಿಂದ ಪ್ರಭು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಕಳೆದ ಹಲವು ದಿನಗಳಿಂದ ತ್ಯಾಜ್ಯ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ರಸ್ತೆ ಬದಿಯಲ್ಲಿ ಕೊಳೆತ ಕಸದ ರಾಶಿ ಬಿದ್ದಿದ್ದು, ಅದರಿಂದ ಹೊರಬರುವ ಕೊಳಕು ನೀರು ನೇತ್ರಾವತಿ ನದಿಗೆ ಸೇರುತ್ತಿದೆ. ಇದು ಪರಿಸರಕ್ಕೂ ಸಾರ್ವಜನಿಕ ಆರೋಗ್ಯಕ್ಕೂ ದೊಡ್ಡ ಅಪಾಯ. ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ. ಸ್ಥಳೀಯರ ಆರೋಪದಂತೆ, ಸಮಸ್ಯೆ ಬಗ್ಗೆ ಹಲವು ಬಾರಿ ಗಮನ ಸೆಳೆದಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡಿಲ್ಲ. ವಾಹನಗಳ ದುರಸ್ತಿ, ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ಸ್ವಚ್ಛತಾ ವ್ಯವಸ್ಥೆ ಸುಧಾರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಕ್ಷಣವೇ ನದಿ ತೀರದಲ್ಲಿ ರಾಶಿಯಾಗಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಮನೆ ಮನೆ ಕಸ ಸಂಗ್ರಹ ವ್ಯವಸ್ಥೆಯನ್ನು ಸುಗಮಗೊಳಿಸುವ ಜೊತೆಗೆ ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ನಾಗರಿಕರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…